ಬಜೆಟ್ ಬಗ್ಗೆ ಭರಪೂರ ನಿರೀಕ್ಷೆ

Great expectations about the budget
Published on

ಮಡಿಕೇರಿ:

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಈ ತಿಂಗಳ 16ಕ್ಕೆ ಮಂಡನೆ ಆಗುವ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿ ಘೋಷಣೆಗಳ ಅನುಷ್ಠಾನ ಆಗಿರುವ ಬೆನ್ನಲ್ಲೇ ಈ ಬಜೆಟ್ ಮಂಡಿಸಲಾಗುತ್ತಿದ್ದು, ಜನಸಾಮಾನ್ಯರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಪ್ರಸ್ತುಪಡಿಸುತ್ತಿರುವ ಬಜೆಟ್ ಆಗಿರುವುದರಿಂದ ನಿರೀಕ್ಷೆಗಳೂ ಸಾಕಷ್ಟಿದೆ. ಈಗಾಗಲೇ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಚುನಾವಣೆಯ ಭರವಸೆಗಳು ಇಲ್ಲದಿರುವುದರಿಂದ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಏನಿರಬಹುದು ಎನ್ನುವ ಕುತೂಹಲವೂ ಸಹಜವಾಗಿ ಸಾರ್ವಜನಿಕರನ್ನು ಕಾಡುತ್ತಿದೆ.

ಕೊಡಗಿನಲ್ಲಿ ಅಪೂರ್ಣ ಕಾಮಗಾರಿಗಳದ್ದೇ ದೊಡ್ಡ ಸವಾಲು. ಮಡಿಕೇರಿಯಲ್ಲಿ ಜಿಲ್ಲಾಡಳಿತ ಭವನ ತಡೆಗೋಡೆ, ಕನ್ನಡ ಸಮುಚ್ಛಯ, ಕೊಡವ ಹೆರಿಟೇಜ್ ಕಟ್ಟಡ, ಒಳಚರಂಡಿ ಕಾಮಗಾರಿ, ಕುಶಾಲನಗರದಲ್ಲಿ ಕಲಾಭವನ ಕಟ್ಟಡ, ಸೋಮವಾರಪೇಟೆಯಲ್ಲಿ ಶತಮಾನೋತ್ಸವ ಭವನ ಕಟ್ಟಡ ಹೀಗೆ ಜಿಲ್ಲೆಯಾದ್ಯಂತ ಸಾಕಷ್ಟು ಸಂಖ್ಯೆಯ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ. ಕೆಲವು ಕಾಮಗಾರಿಗಳಂತೂ ನಿಂತೇ ಹೋಗಿವೆ. ಇವೆಲ್ಲಾ ಪೂರ್ಣವಾಗಬೇಕಾದರೆ ದೊಡ್ಡ ಮೊತ್ತದ ಅನುದಾನ ಬೇಕಿದೆ.

ಕ್ರೀಡಾ ಜಿಲ್ಲೆಯಾಗಿ ಹೆಸರು ಮಾಡಿರುವ ಕೊಡಗಿನಿಂದ ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಪಟುಗಳು ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಹೆಸರು ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣಗಳ ಕೊರತೆ ಇದೆ. ಸಾಧನೆ ಮಾಡಬೇಕು ಎಂದರೆ ಜಿಲ್ಲೆ ಬಿಟ್ಟು ಹೊರಗೆ ಹೋಗಲೇಬೇಕು ಎನ್ನುವ ಸ್ಥಿತಿ ಇದೆ. ಇದರಿಂದಾಗಿ ಪ್ರತಿಭೆಗಳು ಕಮರುವಂತಾಗಿದೆ. ಪ್ರಸ್ತಾಪಿತ ಕ್ರೀಡಾ ವಿಶ್ವವಿದ್ಯಾಲಯ ಕೊಡಗಿಗೆ ಸಿಕ್ಕಿದರೆ ಜಿಲ್ಲೆಗೆ ಅನುಕೂಲ ಆಗಲಿದೆ. ದೇಶಕ್ಕೆ ಇನ್ನಷ್ಟು ಕೊಡುಗೆ ಸಿಗಲಿದೆ.

ಈಗ ಪ್ರವಾಸೋದ್ಯಮ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲವಾಗಿ ಬೆಳೆಯುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಖಾಸಗಿ ಪ್ರವಾಸೋದ್ಯಮಿಗಳ ಆಸಕ್ತಿಯಿಂದಷ್ಟೇ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಣುತ್ತಿದ್ದು, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ, ಪ್ರವಾಸೋದ್ಯಮ ವಲಯದಲ್ಲಿ ಸಾಕಷ್ಟು ಬೆಳವಣಿಗೆ ಕಾಣಬಹುದಾಗಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಬಜೆಟ್‌ನಲ್ಲೇ ಏರ್‌ಸ್ಟಿçಪ್ ನಿರ್ಮಾಣದ ಪ್ರಸ್ತಾಪ ಆಗಿತ್ತು. ಆದರೆ ಅಧಿನ್ನೂ ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜಿಲ್ಲೆಗೆ ರೈಲ್ವೆ ಸಂಪರ್ಕವೂ ಘೋಷಣೆಯಾಗಿಯೇ ಉಳಿಯುವಂತಿದೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಇವೆರಡೂ ಯೋಜನೆಗಳು ಅನುಷ್ಠಾನಕ್ಕೆ ಬರಬಹುದು. ಹಾಗಾಗಿ ಬಜೆಟ್‌ನಲ್ಲಿ ಈ ಬಗ್ಗೆ ನಿರೀಕ್ಷೆಗಳಿವೆ.

ಕಾಫಿ ಬೆಳೆಗಾರರ ಪಾಲಿಗೆ ಕಗ್ಗಂಟಾಗಿಯೇ ಉಳಿದಿರುವ 10 ಹೆಚ್.ಪಿ. ತನಕದ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ, ಜಿಲ್ಲೆಯ ಕಂದಾಯ ಸಮಸ್ಯೆಗಳಿಗೆ ಪರಿಹಾರ…ಹೀಗೆ ಸಾಕಷ್ಟು ನಿರೀಕ್ಷೆಗಳು ಸಿದ್ದರಾಮಯ್ಯ ಅವರು ಮಂಡಿಸುವ ಬಜೆಟ್ ಮೇಲಿದ್ದು, ಜಿಲ್ಲೆಯ ವಿಜಯವಾಣಿ ಓದುಗರು ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.

ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಗುಣಮಟ್ಟದ ಆರೋಗ್ಯ, ಶಿಕ್ಷಣ ಸಿಗುವಂತಾಗಬೇಕು. ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಮತ್ತು ಮಾರುಕಟ್ಟೆ ಸಿಗುವಂತಾಗಬೇಕು. ಆರ್ಥಿಕ ಸ್ವಾವಲಂಬಿಗಳಾಗಲು ಉತ್ತೇಜನ ನೀಡಬೇಕು.
ಗೀತಾಗಿರೀಶ್, ಆರ್ಥಿಕ ಮತ್ತು ವಿಮಾ ಸಲಹೆಗಾರರು ಮಡಿಕೇರಿ

ಸ್ವಸಹಾಯ ಸಂಘಗಳಿಗೆ ವಿವಿಧ ಯೋಜನೆಗಳನ್ನು ಹೊರತರಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನವನ್ನು ಹೆಚ್ಚಿಸಬೇಕು. ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಕಡಿತ ಮಾಡಬೇಕು.
ಚೊಕ್ಕಾಡಿ ಪ್ರೇಮಾ ರಾಘವಯ್ಯ, ಮಾಜಿ ಸದಸ್ಯೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

ಬರದ ಛಾಯೆ ರಾಜ್ಯದಲ್ಲಿ ಆವರಿಸಿದೆ. ಬದುಕು ಕಷ್ಟದಲ್ಲಿದೆ. ಗ್ಯಾರಂಟಿ ಯೋಜನೆಗಳು ಯೋಚನೆ ಮಾಡಿದ ರೀತಿಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಕಾರ್ಯಾಂಗಕ್ಕೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡಲು ರಾಜ್ಯ ಬೊಕ್ಕಸ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ ನಾಮ್‌ಕೆ ಅವಸ್ತೆ ಆಗದಿರಲಿ.
ನಾಗೇಶ್ ಕುಂದಲ್ಪಾಡಿ, ಅಧ್ಯಕ್ಷ, ಬಿಜೆಪಿ ಕೃಷಿ ಮೋರ್ಚಾ

ಜಿಲ್ಲೆಯಲ್ಲಿ ಹಲವಷ್ಟು ಕಾಮಗಾರಿಗಳು ಭೂಮಿ ಪೂಜೆ ನೇರವೇರಿಸಿ ಅರ್ಧ ಭಾಗದವರೆಗೆ ಮಾತ್ರ ಕೆಲಸ ಮಾಡಿ ನಿಲ್ಲಿಸಲಾಗಿದೆ. ಅಂತಹ ಕಾಮಗಾರಿಗಳನ್ನು ನಿರ್ವಹಿಸಲು ಹೆಚ್ಚಿನ ಅನುದಾನ ಬೇಕಾಗಿದೆ. ಈ ಬಜೆಟ್ ನಲ್ಲಿ ಜಿಲ್ಲೆಗೆ ಅನುದಾನದ ಅವಶ್ಯಕತೆ ಇದ್ದು ಅದನ್ನು ಗಮನದಲ್ಲಿರಿಸಿಕೊಂಡು ಮುಂದಾಗುವ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಪಿ.ಎಫ್. ಸಬಾಸ್ಟಿನ್, ಮಾಜಿ ಅಧ್ಯಕ್ಷ, ಗ್ರಾ.ಪಂ. ಸುಂಟಿಕೊಪ್ಪ

ಈಗಾಗಲೇ ಕೇಂದ್ರ ಬಜೆಟ್ ಎಲ್ಲರನ್ನೂ ಸಮಾನವಾಗಿ ಕಂಡಿರುವುದು ರಾಜ್ಯ ಬಜೆಟ್ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಕೊಡಗಿನ ಮಟ್ಟಿಗೆ ವಿಶೇಷ ಅನುದಾನದ ಅವಶ್ಯಕತೆ ಇದೆ. 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್, ಪ್ರಾಣಿ-ಮಾನವ ಸಂಘರ್ಷ ಪ್ರದೇಶಕ್ಕೆ ವಿಶೇಷ ಅನುದಾನ ಬೇಕಿದೆ.
ಆರ್. ಸುಭೀಶ್, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪ

ರಾಜ್ಯ ಬಜೆಟ್ ಉತ್ತಮವಾಗಿರಬೇಕು. ರೈತರಿಗೆ ಅನುಕೂಲಕರವಾಗಿರಬೇಕು. ರೈತರ ಪಂಪ್ ಸೆಟ್ ಬಿಲ್ ಪಾವತಿ ಗೊಂದಲದಲ್ಲಿದೆ ಕಟ್ಟ ಬೇಕೋ, ಬೇಡವೊ ಎಂದು ಅಂತಿಮಗೊಳಿಸ ಬೇಕು. ಈ ಬಗ್ಗೆ ಇನ್ನೂ ರೈತರಲ್ಲಿ ಗೊಂದಲ ಇದೆ. ರೈತರು ಬಳಸುವ ಗೊಬ್ಬರ ಸೇರಿದಂತೆ ಇನ್ನಿತರ ಬಳಕೆಗೆ ರಿಯಾಯ್ತಿ ನೀಡಬೇಕು. ಮುಂದಿನ ಲೋಕಸಭಾ ಚುನಾವಣೆ ಮುಂದಿಟ್ಟು ಆಶ್ವಾಸನೆಯ ಬಜೆಟ್ ಇದಾಗದಿರಲಿ.

  • ಶಿಭು, ಕೃಷಿಕ, ಸಂಪಿಗೆದಾಳು ಗಾಮ

ಹಿಂದಿನ ಸರ್ಕಾರ ಅನುದಾನ ನೀಡದೆಯೋ ಏನೋ ಕುಶಾಲನಗರ ತಾಲೂಕಿನಲ್ಲಿ ಹಲವು ಯೋಜನೆಗಳನ್ನು ಆರಂಭಿಸಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಆ ಎಲ್ಲಾ ಯೋಜನೆಗಳಿಗೆ ಅನುದಾನ ಕೊರತೆಯಾಗದಂತೆ ಈಗಿನ ಸಿದ್ದರಾಮಯ್ಯ ಸರ್ಕಾರ ಹಣ ಬಿಡುಗಡೆ ಮಾಡಿ ಪೂರ್ಣಗೊಳಿಸುವ ವಿಶ್ವಾಸ ನಮ್ಮದು. ಹಾರಂಗಿಯಿAದ ಕುಡಿಯುವ ನೀರು ತರುವ ಯೋಜನೆಯು ಈ ಬಾರಿ ಆಗುತ್ತದೆ ಅನ್ನಿಸುತ್ತೆ. ವಿಶೇಷವಾಗಿ ಈ ಬಾರಿ ಮಳೆ ಅಭಾವದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ. ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು.

  • ವಿ.ಜೆ. ನವೀನ್, ಅಧ್ಯಕ್ಷ, ಕಾಂಗ್ರೆಸ್ ಕಿಸಾನ್ ಘಟಕ, ಕುಶಾಲನಗರ ಬ್ಲಾಕ್
  • ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಯುಜಿಡಿ, ಕಲಾಭವನ, ತಾಲೂಕು ಭವನ ನಿರ್ಮಾಣಕ್ಕೆ ಅನುದಾನ ನೀಡುವ ನಿರೀಕ್ಷೆಯಲ್ಲಿದ್ದೇವೆ. ಪುರಸಭೆ ವ್ಯಾಪ್ತಿಯ ರಸ್ತೆಗಳು ಅಭಿವೃದ್ಧಿ ಕಾಣದೆ ಹಲವು ವರ್ಷಗಳಾಗಿದ್ದು ಸರ್ಕಾರ ವಿಶೇಷ ಅನುದಾನದ ಮೂಲಕ ರಸ್ತೆ ಅಭಿವೃದ್ಧಿಗೊಳಿಸಬೇಕು.
  • ಕೆ.ಟಿ. ಬನಶಂಕರಿ, ಗೃಹಿಣಿ, ಕುಶಾಲನಗರ.
  • ಕಾಫಿ ಉದ್ದಿಮೆಯಿಂದ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರಕ್ಕೂ ಅತೀ ಹೆಚ್ಚು ಆದಾಯ ಬರುತ್ತಿದೆ. ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅಕಾಲಿಕ ಮಳೆಯಿಂದ ಕಾಫಿ ಕೃಷಿ ಅಸಾಧ್ಯ ಎಂಬ ಆತಂಕವಿದೆ. ಸಣ್ಣ ಬೆಳೆಗಾರರ 10 ಎಚ್.ಪಿ.ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಕಾಫಿ ಕೃಷಿಗಾಗಿ ಈಗಾಗಲೇ ಉಪಯೋಗಿಸಿರುವ ವಿದ್ಯುತ್ ಬಿಲ್, ಬಡ್ಡಿ,ಚಕ್ರಬಡ್ಡಿಯನ್ನು ಮನ್ನಾ ಮಾಡಬೇಕು. ಭತ್ತ ಕೃಷಿ ಪುನಶ್ಚೇತನಕ್ಕೆ ಎಕರೆಗೆ 20 ಸಾವಿರ ಸಹಾಯಧನ ಘೋಷಿಸಬೇಕು.
  • ಎ.ಆರ್. ಕುಶಾಲಪ್ಪ, ಕೃಷಿಕ, ಯಡೂರು ಗ್ರಾಮ.
  • ಕೊಡಗು ಪ್ರವಾಸಿ ತಾಣವಾಗಿರುವುದರಿಂದ  ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹೆಚ್ಚು ಅನುದಾನ ನೀಡಬೇಕಾಗಿದೆ. ಕೊಡಗಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಕಳೆದ ಮಹಾಪ್ರಳಯದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ಕಲ್ಪಿಸಿಕೊಡಬೇಕಾಗಿದೆ. ಕಾಡು ಪ್ರಾಣಿಗಳಿಂದ ರೈತರನ್ನು ಹಾಗೂ ಬೆಳೆಗಳನ್ನು ರಕ್ಷಿಸಲು ಹೆಚ್ಚು ಅನುದಾನ ಇಡಬೇಕಾಗಿದೆ
  • - ಭರತ್, ಜಿಲ್ಲಾ ಕಾರ್ಯದರ್ಶಿ, ಸಿಪಿಎಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net