

ಉಡುಪಿ : ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರು 20 ವರ್ಷಕ್ಕೊಮ್ಮೆ ಸಂಭವಿಸುವ ಖಗೋಳ ವಿಸ್ಮಯ ಗುರು-ಶನಿ ಸಮಾಗಮವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. ಗುರು ಹಾಗು ಶನಿಯ ಸಾಮೀಪ್ಯ ವಿಶೇಷ ವಿದ್ಯಮಾನವಾಗಿದ್ದು, ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನುತ್ತಾರೆ ಎಂದು ಈ ಬಗ್ಗೆ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ವಿವರಣೆ ನೀಡಿದರು.
ಭೂಮಿಯಿಂದ ಸೂರ್ಯನಿಗಿರುವ ದೂರದ (ಖಗೋಳಮಾನ) 5ರಷ್ಟು ದೂರದಲ್ಲಿ ಗುರುಗ್ರಹವಿದ್ದು, ಇದು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷಗಳು ಬೇಕು. ಶನಿಯು, ಭೂಮಿ ಹಾಗೂ ಸೂರ್ಯನ ಅಂತರದ 2ರಷ್ಟು ಅಂತರವಿದ್ದು, ಪರಿಭ್ರಮಿಸಲು 29.46 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು. ಈ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಹಾಗೂ ಪ್ರತಿ ಸಮಾಗಮದಲ್ಲಿ ಅವುಗಳ ನಡುವಿನ ಅಂತರ ಬದಲಾಗುತ್ತಿರುತ್ತದೆ. ಶನಿ ಗ್ರಹ ಸೂರ್ಯನ ಸುತ್ತ ಸುತ್ತಲೂ 19 ವರ್ಷ ತೆಗೆದುಕೊಂಡರೆ, ಗುರು ಗ್ರಹ 11 ವರ್ಷ ತೆಗೆದುಕೊಳ್ಳಲಿದೆ. ಇದು ಭೂಮಿಗೆ ಹತ್ತಿರವಾಗಿ ಕಾಣಿಸುವುದು 20 ವರ್ಷಕ್ಕೆ ಮಾತ್ರ.
ಈ ಹಿಂದೆ 2000 ಇಸವಿಯಲ್ಲಿ ಕೋನಾಂತರ 1 ಡಿಗ್ರಿಗಿಂತ ಹೆಚ್ಚು ಕಾಣಿಸಿದ್ದು, ಈ ಸಲ 0.1 ಡಿಗ್ರಿ ಅಂತರದಲ್ಲಿ ಗೋಚರವಾಗಿದೆ. ಈ ಹಿಂದೆ ಇಷ್ಟೇ ಹತ್ತಿರ 1624 ವರ್ಷದ ಹಿಂದೆ ಗುರು ಮತ್ತು ಶನಿಗ್ರಹ ಸಾಮಿಪ್ಯವಾಗಿತ್ತು. ಸೂರ್ಯನ ಹತ್ತಿರ ಇದ್ದುದರಿಂದ ಇದು ಗೋಚರಿಸಿರಲಿಲ್ಲ. ಬಳಿಕ 794 ವರ್ಷದ ಹಿಂದೆ ಭೂಮಿ ಮೇಲೆ ಇಷ್ಟು ಹತ್ತಿರದಿಂದ ಗೋಚರವಾಗಿದೆ. ಮುಂದಿನ 2040 ಮತ್ತು 2080 ರಲ್ಲಿ ಈ ಸಮಾಗಮವನ್ನು ಕಣ್ತುಂಬಿಕೊಳ್ಳಬಹುದು ಎನ್ನುತ್ತಾರೆ ಉಪನ್ಯಾಸಕ ಅತುಲ್.
200 ಮಂದಿ ಸಾರ್ವಜನಿಕರು ಈ ಖಗೋಳ ಕೌತುಕವನ್ನು ಕಣ್ತುಂಬಿಕೊಂಡರು. 3 ಟೆಲಿಸ್ಕೋಪ್‌ಗಳಲ್ಲಿ 2ನ್ನು ಸಾರ್ವಜನಿಕ ವೀಕ್ಷಣೆಗೆ, ಒಂದು ಟೆಲಿಸ್ಕೋಪನ್ನು ಯುಟ್ಯೂಬ್ ಲೈವ್ ಸ್ಟ್ರೀಮ್ ಇರಿಸಲಾಗಿತ್ತು. ಪಿಪಿಸಿ ನಿವೃತ್ತ ಪ್ರಾಂಶುಪಾಲ, ಖಗೋಳ ತಜ್ಞ ಡಾ.ಎ.ಪಿ ಭಟ್, ಬೆಂಗಳೂರು ಜವಾಹರ್‌ಲಾಲ್ ನೆಹರು ತಾರಾಲಯದ ಮಾಜಿ ನಿರ್ದೇಶಕ ಡಾ.ಬಿ.ಎಸ್ ಶೈಲಜಾ ಸಾರ್ವಜನಿಕರಿಗೆ ಗುರು-ಶನಿ ಸಮಾಗಮದ ಖಗೋಳ ವಿಸ್ಮಯದ ಬಗ್ಗೆ ಮಾಹಿತಿ ನೀಡಿದರು. ಪೂರ್ಣಪ್ರಜ್ಞ ಕಾಲೇಜು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಮೊಹಮ್ಮದ್ ಅಶೀಂ ಗುರು-ಶನಿ ಕೋನಾಂತರವನ್ನು ಮಾಪನ ಮಾಡಿದ್ದು, ಇವರಿಗೆ ಉತ್ತಮ ಫಲಿತಾಂಶ ದೊರೆತಿದೆ.