

ಬಾಳೆಹೊನ್ನೂರು: ಸತ್ವ ಗುಣ ಬೆಳೆಸಿ ಮನಸನ್ನು ಪರಿಶುದ್ಧವಾಗಿಸಲು ಆದರ್ಶ ವ್ಯಕ್ತಿಗಳ ಮಾರ್ಗದರ್ಶನ ಅವಶ್ಯಕ. ಸಜ್ಜನರ ಒಡನಾಟದಿಂದ ಶ್ರೇಷ್ಠ ಲ ಪ್ರಾಪ್ತಿಯಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗಿದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಳೆಯ ಬಿದಿರು ಸುಲಭವಾಗಿ ಮಣಿಯುತ್ತದೆ. ಬಲಿತ ಬಿದಿರು ಬಗ್ಗದು. ಹಾಗೆಯೇ ಎಳೆಯ ಮನಸ್ಸನ್ನು ತಿದ್ದಬಹುದು. ಬಲಿತ ಮನಸ್ಸನ್ನು ತಿದ್ದುವುದು ಸುಲಭವಲ್ಲ. ಮನುಷ್ಯನಲ್ಲಿ ಪ್ರಾಪಂಚಿಕ ವಾಸನೆಗಳು ಸೋಂಕುವ ಮುನ್ನ ಯೋಗ್ಯ ಸಂಸ್ಕಾರ ಕೊಟ್ಟರೆ ಸದ್ಗುಣಿಗಳನ್ನಾಗಿ ಮಾಡಲು ಸಾಧ್ಯವಾಗುವು ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಬದುಕಿನ ಉನ್ನತಿಗೆ ಧರ್ಮ ಅಡಿಪಾಯವಾಗಿದ್ದು, ಉತ್ತಮರ ಒಡನಾಟದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ವಿಚಾರ, ವಿಮರ್ಶೆಗಳು ಸಂಸ್ಕೃತಿ ಮೇಲೆ ಹೊಸ ಬೆಳಕು ಮೂಡಿಸಬೇಕೆ ಹೊರತು ನಾಸ್ತಿಕರನ್ನಾಗಿ ಮಾಡಬಾರದು. ಎಲ್ಲ ರಂಗಗಳಲ್ಲಿ ಸಂಘಟನೆಗಳು ನಡೆಯಲಿ. ಆದರೆ ಸಂಘರ್ಷಗಳು ನಡೆಯಬಾರದು. ಮನುಷ್ಯನ ವರ್ತನೆಗಳು ಅತಿರೇಕಗೊಂಡಾಗ ದೇವರು ಯಾವ ರೂಪದಲ್ಲಾದರೂ ಬಂದು ಅಹಂಕಾರ ನಾಶಗೊಳಿಸಬಲ್ಲ. ಕತ್ತಲನ್ನು ಮೀರಿ ಬೆಳಕು ನೀಡುವುದರಿಂದಲೇ ದೀಪಕ್ಕೊಂದು ಬೆಲೆ. ಕಷ್ಟಗಳನ್ನು ಮೀರಿ ಬೆಳೆದು ನಿಂತಾಗಲೇ ಬದುಕಿಗೊಂದು ಬೆಲೆ ಬರಲು ಸಾಧ್ಯ ಎಂದು ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚಿಂತೆಗಿಂತ ದೊಡ್ಡ ಕಾಯಿಲೆ ಇಲ್ಲ. ಖುಷಿಗಿಂತ ದೊಡ್ಡ ಔಷಧ ಯಾವುದೂ ಇಲ್ಲ. ಮನುಷ್ಯ ವಿಷಯ ವಾಸನೆಗಳಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ವಿಚಾರಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.
ಚಿಕ್ಕಮಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌ನ 185ನೇ ವಾರ್ಷಿಕ ಸಮಾವೇಶ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಬೆಳಗ್ಗೆ ಪೀಠದ ಎಲ್ಲ ದೈವಗಳಿಗೆ ಶ್ರಾವಣ ವಿಶೇಷ ಪೂಜೆ ಜತೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಖಜಾಂಚಿ ಉಪ್ಪಳ್ಳಿ ಬಸವರಾಜ, ಆಲ್ದೂರು ಬಿ.ಬಿ.ರೇಣುಕಾರ್ಯರು, ಕೆ.ವೀರರಾಜ್, ಎ.ಎಸ್.ಸೋಮಶೇಖರಯ್ಯ, ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ.ದೇವಣ್ಣಗೌಡ, ಬಿ.ಎ.ಶಿವಶಂಕರ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ, ಹಗರಿಬೊಮ್ಮನಹಳ್ಳಿ ತಿಪ್ಪೇಸ್ವಾಮಿ ಇತರರು ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.