

ಹನೂರು: ಸಮೀಪದ ಬೂದುಬಾಳು, ಕಾಮಗೆರೆ ಹಾಗೂ ಹನೂರು ಪಟ್ಟಣದಲ್ಲಿ ಶನಿವಾರ ತಲಾ ಒಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರು ವಾಸವಿದ್ದ ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಪಟ್ಟಣದ ಸೊಪ್ಪಿನಕೇರಿ ಬಡಾವಣೆಯಲ್ಲಿ ವಾಸವಿದ್ದ 39 ವರ್ಷದ ಮಹಿಳೆ ವಾರದ ಹಿಂದೆ ತನ್ನ ತಂದೆ ಮನೆ ಮಂಡ್ಯಕ್ಕೆ ತೆರಳಿ ವಾಪಸ್ಸಾಗಿದ್ದರು. ಈ ವೇಳೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಲಾಗಿತ್ತು. ಶನಿವಾರ ವರದಿ ಪಾಸಿಟಿವ್ ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತೆಯನ್ನು ಜಿಲ್ಲಾ ಕ್ವಾರಂಟೈನ್‌ಗೆ ಕಳುಹಿಸಲಾಯಿತು.
ಸೋಂಕಿತೆ ವಾಸವಿದ್ದ ಬೀದಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಹಾಗೂ ಆ ಬೀದಿಯ ಸುತ್ತಮುತ್ತಲ ಪ್ರದೇಶವನ್ನು ಬಫರ್‌ಜೋನ್ ಎಂದು ಗುರುತಿಸಲಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಪಪಂ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಬೀದಿಗಳಿಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ.
ಬೂದುಬಾಳು: ಸಮೀಪದ ಬೂದುಬಾಳು ಗ್ರಾಮದಲ್ಲೂ ಶನಿವಾರ ಸುಮಾರು 55 ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈತ ಗ್ರಾಮದ ವೆಂಕಟರಮಣಸ್ವಾಮಿ ದೇಗುಲದ ಸಮೀಪದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಆದರೆ ವಾರದ ಹಿಂದೆ ಜ್ವರಕ್ಕೆ ತುತ್ತಾದ ಪರಿಣಾಮ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈ ವೇಳೆ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ದೃಢಪಟ್ಟ ಹಿನ್ನೆಲೆ ಆತನನ್ನು ಜಿಲ್ಲಾ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಸೋಂಕಿತ ವಾಸವಿದ್ದ ಬೀದಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಗ್ರಾಮಕ್ಕೆ ಗ್ರಾಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ.
ಕಾಮಗೆರೆಯಲ್ಲೂ ಸೋಂಕು ದೃಢ: ಸಮೀಪದ ಕಾಮಗೆರೆ ಗ್ರಾಮದ ಹೊಸಕೆರೆ ಬೀದಿಗೆ ಬೆಂಗಳೂರಿನಿಂದ ಬಂದು ವಾಸವಿದ್ದ 24 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿದೆ. ಸುದ್ದಿ ತಿಳಿದು ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಸೋಂಕಿತನನ್ನು ಕ್ವಾರಂಟೈನ್‌ಗೆ ಕಳುಹಿಸಿದರು.
ಬೀದಿಯನ್ನು ಸೀಲ್‌ಡೌನ್ ಮಾಡಲಾಯಿತು.