

ದೇವದುರ್ಗ: ಜಾಲಹಳ್ಳಿ ನಾಡಕಚೇರಿ ಹಾಗೂ ಗ್ರಾಪಂ ಕಚೇರಿ ಹಿಂಭಾಗದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದ್ದು, ಶವಸಂಸ್ಕಾರಕ್ಕೆ ಸಮಸ್ಯೆಯಾಗುತ್ತಿದೆ.
ಗ್ರಾಮದಲ್ಲಿ ಎರಡು ಕಡೆ ಸಾರ್ವಜನಿಕ ಸ್ಮಶಾನ ಭೂಮಿ ಗುರುತಿಸಲಾಗಿದ್ದು, ಗ್ರಾಪಂ ಕಚೇರಿ ಹಿಂಭಾಗದಲ್ಲಿ ಸುಮಾರು 10 ಗುಂಟೆ ಜಾಗದಲ್ಲಿ ಹಲವು ವರ್ಷಗಳಿಂದ ಶವಸಂಸ್ಕಾರ ಮಾಡಲಾಗುತ್ತಿತ್ತು. ಈ ರುದ್ರಭೂಮಿ ತಗ್ಗು ಪ್ರದೇಶದಲ್ಲಿದ್ದು ಸ್ವಲ್ಪ ಮಳೆಬಂದರೂ ಸಂಪೂರ್ಣ ಜಲಾವೃತಗೊಳ್ಳುತ್ತದೆ. ರುದ್ರಭೂಮಿ ಸ್ವಚ್ಛತೆಗೆ ಗ್ರಾಪಂ ಆದ್ಯತೆ ನೀಡಿಲ್ಲ. ಎಲ್ಲೆಂದರಲ್ಲಿ ಜಾಲಿ ಬೆಳೆದಿದ್ದು, ಜನರು ಕಸತಂದು ಅಲ್ಲೇ ಸುರಿಯುತ್ತಾರೆ. ನಾಡಕಚೇರಿ, ಗ್ರಾಪಂ ಕಚೇರಿ ತ್ಯಾಜ್ಯವೆಲ್ಲಾ ಅಲ್ಲೇ ಸುರಿಯಲಾಗುತ್ತಿದೆ.
ಜಾಗದ ಕೊರತೆಯಿಂದ ಸದರಿ ಸ್ಥಳದಲ್ಲಿ ಶವವನ್ನು ಸುಡಲು ಮಾತ್ರ ಅವಕಾಶ ನೀಡಲಾಗಿದೆ. ಹೂಳಲು ದೂರದ ಮುದಗೋಟ ಗ್ರಾಮದ ರಸ್ತೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಳೆಬಂದರೆ ವಾರಗಟ್ಟಲೆ ನೀರು ನಿಲ್ಲುತ್ತಿದ್ದು ಶವಸಂಸ್ಕಾರ ಮಾಡಲು ಸಮಸ್ಯೆಯಾಗುತ್ತಿದೆ. ಶವ ಸಂಸ್ಕಾರಕ್ಕೆ ಬಳಸುವ ಹೂವಿನಹಾರ, ಚಟ್ಟಾ, ಕಾಯಿ ಇತರ ವಸ್ತುಗಳು ನೀರಲ್ಲಿ ತೇಲಾಡುತ್ತಿವೆ. ರುದ್ರಭೂಮಿಯಲ್ಲಿ ಸ್ವಚ್ಛತೆ ಕೈಗೊಂಡು ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.