

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ರಸ್ತೆ ಗುಂಡಿಗಳ ಪರಿಣಾಮ ತೊಕ್ಕೊಟ್ಟಿನಲ್ಲಿ ಮಹಿಳೆಯೊಬ್ಬರ ಜೀವ ಬಲಿದಾನದ ಬಳಿಕ ನಿದ್ದೆಯಿಂದೆದ್ದ ಅಧಿಕಾರಿಗಳು ತಾತ್ಕಾಲಿಕ ಪರಿಹಾರದ ನೆಪದಲ್ಲಿ ಇನ್ನೊಂದು ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದಾರೆ ಎನ್ನುವ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ತೊಕ್ಕೊಟ್ಟಿನಿಂದ ಕೊಣಾಜೆ ವಿಶ್ವವಿದ್ಯಾಲಯಕ್ಕೆ ಹೋಗುವ ಪ್ರಮುಖ ರಸ್ತೆ ಅಲ್ಲಲ್ಲಿ ಹೊಂಡಗಳಿಂದ ತುಂಬಿಕೊಂಡಿದ್ದು, ಅತ್ಯಂತ ಅಪಾಯಕಾರಿಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ ರಸ್ತೆ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ತೊಕ್ಕೊಟ್ಟು- ಚೆಂಬುಗುಡ್ಡೆ ನಡುವಿನ ರಸ್ತೆಯಲ್ಲಿ ದಿನವಿಡೀ ವಾಹನ ಸಂದಣಿ ಇರುತ್ತದೆ. ಈ ರಸ್ತೆ ವಿಸ್ತರಣೆಗಾಗಿ 2020ರ ಜನವರಿ 31ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಇನ್ನೂ ಕೆಲಸ ಆರಂಭಿಸಿಲ್ಲ. ಚೆಂಬುಗುಡ್ಡೆಯಿಂದ ಕುತ್ತಾರ್‌ವರೆಗಿನ ರಸ್ತೆ ಚತುಷ್ಪಥಗೊಂಡು ಎರಡು ವರ್ಷಗಳಾಗಿವೆ. ಕಾಮಗಾರಿ ನಡೆದ ಮೊದಲ ಮಳೆಗಾಲದಲ್ಲೇ ಹೊಂಡಗಳಿಂದ ತುಂಬಿತ್ತು. ಬಳಿಕ ತೇಪೆ ಹಾಕಲಾಗಿದ್ದು, ಈ ಬಾರಿ ಮತ್ತೆ ಅಲ್ಲಲ್ಲಿ ಹೊಂಡಗಳು ಪ್ರತ್ಯಕ್ಷಗೊಂಡು ವಾಹನ ಸವಾರರ ಜೀವ ಹಿಂಡುತ್ತಿದೆ.
ಈ ರಸ್ತೆ ಕಿರಿದಾಗಿ ತೀರಾ ಹದಗೆಟ್ಟಿದ್ದು, ಮಳೆಗಾಲ ಸಂದರ್ಭ ದೊಡ್ಡ ಹೊಂಡಗಳಿಗೆ ತೇಪೆ ಹಾಕಲಾಗಿತ್ತು. ನಂತರದ ದಿನಗಳಲ್ಲಿ ಆಸುಪಾಸಿನಲ್ಲಿ ಅಪಾಯಕಾರಿ ಹೊಂಡ ಬಿದ್ದಿದ್ದು, ಜಲ್ಲಿಕಲ್ಲುಗಳು ರಸ್ತೆಯಲ್ಲೇ ಹರಡಿದ್ದವು. ಇದರಿಂದಾಗಿ ಇಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ದ್ವಿಚಕ್ರ ವಾಹನ ಸಂಚಾರ ಅತ್ಯಂತ ಅಪಾಯಕಾರಿ ಎನಿಸಿತ್ತು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ ಪರಿಣಾಮ ಶನಿವಾರ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ರಸ್ತೆಗೆಸೆಯಲ್ಪಟ್ಟು ಟ್ಯಾಂಕರ್‌ನಡಿಗೆ ಬಿದ್ದು ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮತ್ತು ಡಿವೈಎಫ್‌ಐ ಸಂಟನೆ ರಾತ್ರಿಯೇ ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡಂತೆ ವರ್ತಿಸಿದ ಅಧಿಕಾರಿಗಳು ಭಾನುವಾರ ಬೆಳಗ್ಗೆಯೇ ಕಾರ್ಮಿಕರನ್ನು ಕಳುಹಿಸಿ ಹೊಂಡಗಳಿಗೆ ಸಣ್ಣ ಜಲ್ಲಿ ಮತ್ತು ಹುಡಿ ಹಾಕಿ ಮುಚ್ಚಿ ತಾತ್ಕಾಲಿಕ ಪರಿಹಾರ ಕಲ್ಪಿಸಲು ಮುಂದಾಗಿದೆ. ಆದರೆ ಈ ಜಲ್ಲಿಹುಡಿ ಬಿಸಿಲ ಬೇಗೆಗೆ ಎದ್ದು ಹೋಗುತ್ತಿದ್ದು ಧೂಳಿನ ಜತೆ ಇನ್ನಷ್ಟು ಜಲ್ಲಿ ಕಲ್ಲುಗಳೂ ರಸ್ತೆಯಲ್ಲಿ ಹರಡಿ ಮತ್ತೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.