ಭಾರಿ ಮಳೆಗೆ ರಸ್ತೆಯಲ್ಲಿ ಜಲ್ಲಿಕಲ್ಲು, ಮರಳು ಸಂಗ್ರಹ

bhr rain
ಬಾಳೆಹೊನ್ನೂರು ಜೇಸಿ ವೃತ್ತದಲ್ಲಿ ಮರಳು, ಜಲ್ಲಿಕಲ್ಲು ಸಂಗ್ರಹವಾಗಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಆರಂಭಗೊಂಡ ಮಳೆ ಶನಿವಾರ ಮುಂಜಾನೆವರೆಗೆ ಧಾರಾಕಾರವಾಗಿ ಸುರಿಯಿತು.

ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಆರಂಭಗೊಂಡ ತುಂತುರು ಮಳೆ ಮಧ್ಯರಾತ್ರಿ 1 ಗಂಟೆ ವೇಳೆಗೆ ಗುಡುಗು ಸಹಿತವಾಗಿ ಬಿರುಸುಗೊಂಡು ಶನಿವಾರ ಮುಂಜಾನೆ 4 ಗಂಟೆವರೆಗೆ ಅಬ್ಬರಿಸಿತು. ಭಾರಿ ಮಳೆಯಿಂದಾಗಿ ಚರಂಡಿ, ಹಳ್ಳ, ಕೊಳ್ಳಗಳಲ್ಲಿ ನೀರು ರಭಸವಾಗಿ ಹರಿದಿದ್ದು, ಹಲವೆಡೆಗಳಲ್ಲಿ ಮುಖ್ಯರಸ್ತೆಗೆ ಮರಳು, ಜಲ್ಲಿ, ಕಸಕಡ್ಡಿ ತೊಳೆದುಕೊಂಡು ಬಂದು ಸಂಗ್ರಹವಾಗಿದೆ.
ಪಟ್ಟಣದ ಜೇಸಿ ವೃತ್ತದ ಬಳಿ ಬಿ.ಕಣಬೂರು ಗ್ರಾಪಂ ಸಂಪರ್ಕಿಸುವ ಚರ್ಚ್ ರಸ್ತೆಯಿಂದ ಅಪಾರ ಪ್ರಮಾಣದ ಜಲ್ಲಿಕಲ್ಲು, ಮರಳು ಬಂದು ನಿಂತು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಜೇಸಿ ವೃತ್ತದ ಬಳಿ ಕಸಕಡ್ಡಿ ಬಂದು ಸಂಗ್ರಹವಾಗುತ್ತಿದ್ದು, ಮುಖ್ಯರಸ್ತೆಯಾಗಿರುವುದರಿಂದ ವಾಹನ ಚಾಲಕರು, ಅದರಲ್ಲೂ ಬೈಕ್ ಸವಾರರು ಸಮಸ್ಯೆ ಎದುರಿಸಬೇಕಾಗಿದೆ.
ಪಟ್ಟಣದ ಡೋಬಿ ಹಳ್ಳದ ಸೇತುವೆ ಮೇಲೂ ಸಾಕಷ್ಟು ಪ್ರಮಾಣದಲ್ಲಿ ಜಲ್ಲಿ, ಕಸಕಡ್ಡಿ ಸಂಗ್ರಹವಾಗಿದೆ. ಇಟ್ಟಿಗೆ ಶಿವನಗರದ ಬಳಿಯಲ್ಲಿಯೂ ಮುಖ್ಯರಸ್ತೆಗೆ ಮರಳು, ಜಲ್ಲಿಕಲ್ಲು ಬಂದು ನಿಂತಿದೆ. ಜೇಸಿ ವೃತ್ತದ ಬಳಿ ಸಂಗ್ರಹವಾಗಿದ್ದ ಕಸ, ಕೆಸರನ್ನು ಗ್ರಾಪಂ ಕಸ ವಿಲೇವಾರಿ ಸಿಬ್ಬಂದಿ ಸ್ವಚ್ಛಗೊಳಿಸಿದರು.
ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಭದ್ರಾ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಬೇಸಿಗೆಯಲ್ಲಿ ಹಳ್ಳದಂತಾಗಿದ್ದ ನದಿ ಈಗ ವೈಭವ ಮರಳಿ ಪಡೆಯುತ್ತಿದೆ.
ಶನಿವಾರ ಇಡೀ ದಿನ ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಳೆ ಬಿರುಸುಗೊಳ್ಳುತ್ತಿದ್ದಂತೆ ಕಾಫಿ, ಅಡಕೆ, ಭತ್ತ ಬೆಳೆಗಾರರು ಮುಂಗಾರು ಅವಧಿಯ ಕೆಲಸ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net