

ಹರಿಹರ: ಸಮಾಪನಾ ಪ್ರಕ್ರಿಯೆಯಲ್ಲಿರುವ ನಗರದ ಮೈಸೂರು ಕಿರ್ಲೋಸ್ಕರ್ ಕಂಪನಿ ಕಾರ್ಮಿಕರ ಗ್ರಾಚ್ಯುಟಿಗೆ ಸಂಬಂಧಿಸಿದ ಲೆಕ್ಕ, ಪತ್ರ ಒದಗಿಸಲು ತಹಸೀಲ್ದಾರ್ ಪೃಥ್ವಿ ಸಾನಿಕಂ ಸೂಚಿಸಿದರು.
ಹೈಕೋರ್ಟ್‌ನ ಆದೇಶದಂತೆ ಅವರು ತಾಲೂಕು ಕಚೇರಿಯಲ್ಲಿ ಶುಕ್ರವಾರ ಗ್ರಾಚ್ಯುಟಿ ಪ್ರಕರಣದ ವಿಚಾರಣೆ ನಡೆಸಿದರು.
ಅರ್ಜಿದಾರ ಕಾರ್ಮಿಕರು, ಕಾರ್ಮಿಕ ನಿರೀಕ್ಷಕಿ ಕವಿತಾ ಇದ್ದ ಸಭೆಯಲ್ಲಿ, 2001 ಕ್ಕಿಂತ ಹಿಂದಿನ ಹಾಗೂ ನಂತರದ ಟ್ರಸ್ಟಿನ ಲೆಕ್ಕಪತ್ರ, ಆರ್ಥಿಕ ವಹಿವಾಟು, ಟ್ರಸ್ಟಿನ ವಾರ್ಷಿಕ ವರದಿ, ಬ್ಯಾಂಕ್ ಖಾತೆಗಳ ವಿವರ ನೀಡುವಂತೆ ಎದುರುದಾರ ಮೈಸೂರು ಕಿರ್ಲೋಸ್ಕರ್ ಕಂಪನಿ ಕಾರ್ಮಿಕರ ಗ್ರಾಚ್ಯುಟಿ ಫಂಡ್ ಟ್ರಸ್ಟ್‌ನ ಟ್ರಸ್ಟಿ ಎಸ್. ಪದ್ಮನಾಭನ್ ಅವರಿಗೆ ಕೇಳಿದರು.
ಈಗ ಆ ಮಾಹಿತಿ ತಂದಿಲ್ಲ ಎಂದು ಟ್ರಸ್ಟಿ ಎಸ್. ಪದ್ಮನಾಭನ್ ಅವರು ಉತ್ತರಿಸಿದಾಗ, ಮುಂದಿನ ದಿನದಲ್ಲಿ ಮಾಹಿತಿ ಒದಗಿಸುವಂತೆ ತಹಸೀಲ್ದಾರ್ ಸೂಚಿಸಿದರು.
ಅರ್ಜಿದಾರ ಎಚ್. ಕೃಷ್ಣಮೂರ್ತಿ ಮಾತನಾಡಿ, 2014 ರಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಹಾಗೂ ಉಪಧನ ಪಾವತಿ ಕಾಯ್ದೆಯಡಿ ನೇಮಕಗೊಂಡ ಪ್ರಾಧಿಕಾರಿ ಎಚ್.ಎಲ್. ಗುರುಪ್ರಸಾದ್ ಅವರು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಕಾರ್ಮಿಕರಿಗೆ ಬಡ್ಡಿಯೊಂದಿಗೆ ಗ್ರಾಚ್ಯುಟಿ ನೀಡಲು ಟ್ರಸ್ಟ್ ಬಾಧ್ಯಸ್ಥ ಎಂದು ತೀರ್ಪು ನೀಡಿದ್ದರು. ಆ ತೀರ್ಪನ್ನು ಹೈಕೋರ್ಟ್ ಸಹ ಎತ್ತಿ ಹಿಡಿದು ಅನುಷ್ಠಾನ ಮಾಡುವಂತೆ ತಹಸೀಲ್ದಾರರಿಗೆ ಆದೇಶಿಸಿತ್ತು ಎಂದರು.
2023 ರ ಮಾರ್ಚ್ 13 ರಂದು ಆದೇಶ ನೀಡಿರುವ ಹೈಕೋರ್ಟ್ ಸದರಿ ಪ್ರಕ್ರಿಯೆಯನ್ನು ಆದೇಶ ಪ್ರತಿ ತಲುಪಿದ 3 ತಿಂಗಳೊಳಗೆ ಪೂರ್ಣಗೊಳಿಸಲು ಆದೇಶಿಸಿದೆ. ಆದಷ್ಟು ಬೇಗ ನಮಗೆ ಗ್ರಾಚ್ಯುಟಿ ಕೊಡಿಸಿ ಎಂದು ವಾದ ಮಂಡಿಸಿದರು.
ಆ.22 ಕ್ಕೆ ಮುಂದಿನ ಮುದ್ದತ್ತು : ಒಂದೂವರೆ ಗಂಟೆ ಕಾಲ ವಿಚಾರಣೆ ನಡೆಸಿದ ತಹಸೀಲ್ದಾರರು ಮುಂದಿನ ಮುದ್ದತ್ತನ್ನು ಆ.22ಕ್ಕೆ ಮುಂದೂಡಿದರು.
ವಿಚಾರಣೆ ವೇಳೆ ಅರ್ಜಿದಾರರು ಹಾಗೂ ಕಾರ್ಮಿಕರಾದ ಕೆ.ಎನ್. ನಾಗರಾಜ್, ಎಂ.ಬಿ. ರಮೇಶ್, ಎಚ್. ರಂಗನಾಥ್ ಬಬಲೇಶ್, ದೇವದಾಸ್, ಶಿವಾಜಿರಾವ್, ರತ್ನಮ್ಮ, ಹುಚ್ಚಪ್ಪ ಹಾಗೂ ಮೃತ ಕಾರ್ಮಿಕರ ಕುಟುಂಬದವರು ಇದ್ದರು.