

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಶ್ರೀ ರಾಮ ಮಂದಿರದ ಮೀನುಗಾರರ ಸೇವಾ ಸಮಿತಿ ವತಿಯಿಂದ ಆಭಾರಿ ಸೇವೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಹಸ್ರಾರು ಮೀನುಗಾರರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಅಭಾರಿ ಸೇವೆ ಪ್ರಯುಕ್ತ ನರಸಿಂಹ ಅಡಿಗ ನೇತೃತ್ವದಲ್ಲಿ ಕೃಷ್ಣ ಅಡಿಗ ಮತ್ತು ನಾಗೇಂದ್ರ ಭಟ್ ಮುಂದಾಳತ್ವದಲ್ಲಿ ಬೆಳಗ್ಗೆ ವರಾಹ, ವಿಷ್ಣು, ನರಸಿಂಹ ದೇವರ ಸನ್ನಿಧಿಯಲ್ಲಿ ಚಂಡಿಕಾ ಹೋಮ, ವಿಷ್ಣು ಸೂಕ್ತ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ಶ್ರೀ ಗಂಗಾಧರೇಶ್ವರ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾಪೂಜೆ ನೆರವೇರಿದವು.
ಲೋಕಕಲ್ಯಾಣಾರ್ಥ, ಮೀನುಗಾರರ ಸುರಕ್ಷತೆ ಸಂಕಲ್ಪದಲ್ಲಿ ಅನ್ನದ ರಾಶಿಗೆ ಪೂಜೆ ಸಲ್ಲಿಸಿ ಬಳಿಕ ಸೌಪರ್ಣಿಕಾ ನದಿಯ ಮೊಸಳೆ ಗುಂಡಿಗೆ ಹಾಗೂ ಸಮುದ್ರರಾಜನಿಗೆ ನೈವೇದ್ಯ ಅರ್ಪಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ರಂಗಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ಪ್ರಮುಖರಾದ ಸುರೇಶ ಖಾರ್ವಿ, ಶೇಖರ ಖಾರ್ವಿ, ವೆಂಕಟರಮಣ ಖಾರ್ವಿ, ವಾಸುದೇವ ಖಾರ್ವಿ, ಸೇವಾ ಸಮಿತಿ ಸದಸ್ಯರು, ಭಕ್ತರು ಇದ್ದರು.