ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸುವೆ: ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿಕೆ

1
Published on

ಮಂಡ್ಯ: ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸ್ಫರ್ಧೆಯನ್ನು ಹೊರತುಪಡಿಸಿಯೂ ಕ್ಷೇತ್ರದ ಜನರ ಸುಖ, ದುಖಃದಲ್ಲಿ ಭಾಗಿಯಾಗುತ್ತೇನೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಕಟ್ಟೆದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದರು. ಆದರೂ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದೇನೆ. ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ನನಗೆ ನಿರೀಕ್ಷೆ ಮೀರಿದ ಸಹಕಾರ ಕ್ಷೇತ್ರದ ಜನರಿಂದ ಸಿಕ್ಕಿದೆ ಎಂದರು.

ಚುನಾವಣೆಯಲ್ಲಿ ಜನರು ತೋರಿದ ಪ್ರೀತಿಗೆ ನನ್ನ ಕುಟುಂಬ ಸದಾ ಋಣಿಯಾಗಿರುತ್ತೇವೆ. ಸ್ಪರ್ಧೆಯಲ್ಲಿ ಸೋಲು ಕಂಡಿರಬಹುದು. ಆದರೆ ಜನರಿಂದ ಪ್ರೀತಿ ಪಡೆಯುವ ವಿಚಾರದಲ್ಲಿ ಗೆದ್ದಿದ್ದೇನೆ. ಹಲವು ವರ್ಷದಿಂದ ನಮ್ಮ ಶಂಭು ಸೇವಾ ಟ್ರಸ್ಟ್‌ನಿಂದ ಸಾಮಾಜಿಕ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಇದರೊಂದಿಗೆ ಕ್ಷೇತ್ರದ ಜನರ ಕಷ್ಟಕ್ಕೆ ಸದಾ ಸ್ಪಂದಿಸುತ್ತೇನೆ ಎಂದು ಹೇಳಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಬೂದನೂರು ಸ್ವಾಮಿ, ಬೂದನೂರು ಗ್ರಾಮ ಪಂಚಾಯಿತಿ ಸದಸ್ಯ ಮಧು, ಮುಖಂಡರಾದ ಶಿವಲಿಂಗಯ್ಯ, ಪುಟ್ಟಸ್ವಾಮಿ, ನಾಗರಾಜು, ಅಭಿ, ಪವನ್, ಶ್ರೀಧರ್ ಇತರರಿದ್ದರು. ಇದೇ ವೇಳೆ ಗ್ರಾಮಸ್ಥರಿಗೆ ಶಂಭು ಸೇವಾ ಟ್ರಸ್ಟ್‌ನಿಂದ ಹಾಟ್‌ಬಾಕ್ಸ್ ವಿತರಿಸುವ ಮೂಲಕ ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net