ಮಿಡತೆ ದಾಳಿ ಎದುರಿಸಲು ಕೃಷಿ ಇಲಾಖೆ ಸಜ್ಜು

midate
Published on

ಬೆಳಗಾವಿ: ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಕೃಷಿ ಬೆಳೆಗಳನ್ನು ನಾಶ ಪಡಿಸುತ್ತಿರುವ ಮಿಡತೆಗಳ ಹಿಂಡು ಬೆಳಗಾವಿ ಜಿಲ್ಲೆ ಪ್ರವೇಶಿಸುವ ಮುನ್ಸೂಚನೆ ಇಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ 10 ಸಾವಿರ ಲೀಟರ್ ಕೀಟನಾಶಕ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜೆಲಾನಿ ಎಚ್. ಮೊಖಾಶಿ ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈಗಾಗಲೇ ಮಹಾರಾಷ್ಟ್ರದ ನಾಗ್ಪುರ ಮತ್ತು ವಿದರ್ಭ ಭಾಗಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮಿಡತೆಗಳು ಲಗ್ಗೆ ಇಟ್ಟಿವೆ. ಅವು ನಮ್ಮ ಜಿಲ್ಲೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಇದ್ದರೂ ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯ 36 ಹೋಬಳಿ ಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟನಾಶಕ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಜತೆಗೆ ಮಿಡತೆಗಳಿಂದ ಬೆಳೆಗಳ ಸಂರಕ್ಷಣೆ ಕುರಿತು ಸಿಬ್ಬಂದಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ತೋಟಗಾರಿಕೆಯ ತರಕಾರಿ, ಹಣ್ಣು-ಹಂಪಲ ಬೆಳೆ ಹೊರತು ಪಡಿಸಿದರೆ ಕೃಷಿ ಇಲಾಖೆಯ ಯಾವುದೇ ಬೆಳೆಗಳು ಭೂಮಿಯಲ್ಲಿ ಇಲ್ಲ ಎಂದು ತಿಳಿಸಿದರು.

ಬೀಜ ಬಿತ್ತನೆ ಮಾಡಿದ ಬಳಿಕ ಬರುವ ಮೊಳಕೆ ಹಾಗೂ ಬೆಳೆದು ನಿಂತಿರುವ ಬೆಳೆಗಳ ಎಲೆಗಳನ್ನು ಮಿಡತೆಗಳು ತಿನ್ನುವುದರಿಂದ ಬೆಳೆಗಳು ಸಂಪೂರ್ಣ ನಾಶವಾಗುತ್ತವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿದರೆ ಅದರ ವಾಸನೆಗೆ ಮಿಡತೆಗಳು ಬರುವುದಿಲ್ಲ. ಅಲ್ಲದೆ, ನಿರಂತರವಾಗಿ ಶಬ್ದ ಮಾಡುತ್ತಿದ್ದರೂ ಅವುಗಳು ಅಂತಹ ಸ್ಥಳಗಳಿಗೆ ಬರುವುದಿಲ್ಲ. ರೈತರು ಆತಂಕ ಪಡಬೇಕಿಲ್ಲ. ಮಿಡತೆ ಹಿಂಡು ಎದುರಿಸಲು ಕೃಷಿ ಇಲಾಖೆ ಸನ್ನದ್ಧವಾಗಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ ಎಂದು ಮೊಖಾಶಿ ತಿಳಿಸಿರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net