ಕುಡಿಯುವ ನೀರಿನಲ್ಲಿ ಜೊಂಡು, ದುರ್ವಾಸನೆ

29 MUL 1
Published on

ಲಕ್ಷ್ಮೇಶ್ವರ: ಪಟ್ಟಣಕ್ಕೆ ಕಳೆದ 20-30 ದಿನಗಳಿಂದ ತುಂಗಭದ್ರಾ ಕುಡಿಯುವ ನೀರು ಸರಬರಾಜು ಆಗದೆ ಜನರು ಪರಿತಪಿಸುತ್ತಿದ್ದಾರೆ. ಎರಡು ದಿನಗಳಿಂದ ನೀರು ಪೂರೈಕೆ ಮಾಡುತ್ತಿರುವುದು ಕೊಂಚ ನಿರಾಳವಾಗಿಸಿದೆ. ಆದರೆ, ಮಂಗಳವಾರ ಪಟ್ಟಣದ ವಾರ್ಡ್ ನಂ.6ರಲ್ಲಿ ಪೂರೈಕೆಯಾದ ಕುಡಿಯುವ ನೀರು ನೋಡಿದ ಜನರು ಗಾಬರಿಯಾಗಿದ್ದಾರೆ.

ನೀರು ಬಂದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದ ಜನರು, ನೀರು ಬಿಟ್ಟ ತಕ್ಷಣ ತುಂಬಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಮನೆಯಲ್ಲಿನ ಕೊಡ, ಟಾಕಿಗಳಲ್ಲಿ ನೀರು ತುಂಬಿಸಿ, ಸಿಂಟೆಕ್ಸ್ ಟ್ಯಾಂಕ್‌ಗೆ ನೀರು ತುಂಬಿಸುವಾಗ ವಾಸನೆ ಕಂಡುಬಂದಿದೆ. ಕೊಡ, ಟಾಕಿಯಲ್ಲಿ ನೀರಿನೊಂದಿಗೆ ಗಲೀಜು ಸಹ ತುಂಬಿಕೊಂಡಿದೆ. ನೀರಿನ ಮೇಲೆ ಜೊಂಡು ಕಂಡುಬಂದಿದೆ. ನೀರು ದುರ್ವಾಸನೆಯಿಂದಲೂ ಕೂಡಿದೆ. ಕೂಡಲೇ ಮುಖ್ಯಾಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ಪೋನ್ ಮಾಡಿ ಇಂತಹ ನೀರು ಕುಡಿಯುವುದು ಹೇಗೆ ಎಂದು ಮಹೇಶ ಕಲಘಟಗಿ ಸೇರಿದಂತೆ ಅನೇಕ ನಿವಾಸಿಗಳು ಪ್ರಶ್ನಿಸಿದ್ದಾರೆ.

ಕಳೆದ 25- 30 ದಿನಗಳಿಂದ ನೀರಿಲ್ಲದೆ ಪರದಾಡುತ್ತಿದ್ದ ಜನರಿಗೆ ಗಲೀಜು ನೀರು ಬಂದಿರುವುದರಿಂದ ಸಮಸ್ಯೆಯಾಗಿದೆ. ಬೇಸಿಗೆಯಲ್ಲಿ ಹನಿ ನೀರಿಗೂ ಪರಿತಪಿಸಬೇಕಾಗಿದೆ. ಇಂತಹ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವಂತಾಗಿದೆ. ನೀರು ಪೂರೈಕೆ ನಿರ್ವಹಣೆಯಲ್ಲಿ ಪುರಸಭೆಯ ನಿರ್ಲಕ್ಷ ಎದ್ದು ಕಾಣುತ್ತಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಾರಕ್ಕೆ ಒಮ್ಮೆ ನೀರು ಪೂರೈಸುವ ನೀರು ಗಲೀಜಾಗಿದ್ದರೆ ಹೇಗೆ ಎಂದು ರಮೇಶ ತೊರಗಲ್ ಎಂಬುವರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net