ದ್ರಾಕ್ಷಿ ಬೆಳೆಗಾರರಿಗೆ ಕಾಡುತ್ತಿರುವ ಚೈನಾ ಗುಮ್ಮ, ಕೇಂದ್ರ ಸಚಿವರೊಂದಿಗೆ ಸಮಾಲೋಚನೆ, ವದಂತಿಗೆ ಕಿವಿಗೊಡದಿರಿ ಸಂಸದ ಜಿಗಜಿಣಗಿ

ramesh jigajinagi
Published on

ವಿಜಯಪುರ: ಒಣದ್ರಾಕ್ಷಿಗೆ ಬಂಪರ್ ಬೆಲೆ ಸಿಕ್ಕಿರುವ ಬೆನ್ನಲ್ಲೇ ರೈತರನ್ನು ಕಾಡುತ್ತಿರುವ ‘ಚೀನಾ ಅಕ್ರಮ ಆಮದು’ವಿನ ಗುಮ್ಮ ನಿವಾರಿಸುವ ನಿಟ್ಟಿನಲ್ಲಿ ಸಂಸದ ರಮೇಶ ಜಿಗಜಿಣಗಿ ದೆಹಲಿ ಸಂಸತ್ ಅಧಿವೇಶನದ ಬಿಡುವಿನ ವೇಳೆಯಲ್ಲಿ ಕೇಂದ್ರದ ವಿದೇಶಾಂಗ ಸಚಿವ ಡಾ.ಎಸ್. ಜಯಶಂಕರ ಹಾಗೂ ಕೈಗಾರಿಕೆ ಮತ್ತು ಮಾರುಕಟ್ಟೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆ ದ್ರಾಕ್ಷಿ ಕಣಜ ಎಂದೇ ಖ್ಯಾತಿ ಪಡೆದಿದೆ. ಸುಮಾರು 35,000 ಎಕರೆ ದ್ರಾಕ್ಷಿ ಕ್ಷೇತ್ರ ಹೊಂದಿದ್ದು, ಕಳೆದ ಹತ್ತು ವರ್ಷದ ನಂತರ ಮೊದಲ ಬಾರಿಗೆ ಬಂಪರ್ ಬೆಲೆ ಸಿಕ್ಕಿದ್ದು ಸಂತಸದ ಸಂಗತಿ. ಆದರೆ, ನೇಪಾಳ ಮಾರ್ಗವಾಗಿ ಚೀನಾದಿಂದ ಒಣದ್ರಾಕ್ಷಿ ತರಿಸಿಕೊಳ್ಳುತ್ತಿರುವ ವದಂತಿ ರೈತರನ್ನು ಆತಂಕಕ್ಕೆ ಈಡುಮಾಡಿದೆ. ಅಲ್ಲದೇ, ಮಧ್ಯವರ್ತಿಗಳು ದರ ಕಡಿಮೆ ಮಾಡಿದ್ದರಿಂದ ರೈತರಿಗೆ ನಷ್ಟವನ್ನುಂಟಾಗುತ್ತಿದೆ ಎಂದು ಮನವರಿಕೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೇ, ಉಭಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾ ‘ನೆರೆಯ ಮಹಾರಾಷ್ಟ್ರದಿಂದಲೂ ಇಂಥದ್ದೊಂದು ಪತ್ರ ಬಂದಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿಯೂ, ಈವರೆಗೆ ಪೂರಕ ದಾಖಲೆಯಾಗಲಿ, ಸ್ಪಷ್ಟ ನಿದರ್ಶನವಾಗಲಿ ಸಿಕ್ಕಿಲ್ಲ’ವೆಂದಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಚೀನಾದಿಂದ ಈವರೆಗೆ ದೇಶದೊಳಗೆ ಣದ್ರಾಕ್ಷಿ ಬಂದಿಲ್ಲ. ಇದೊಂದು ಊಹಾಪೋಹ. ಕೆಲವರು ಮಾರುಕಟ್ಟೆ ದರ ಕೆಡಿಸಲು ಇಂಥ ವದಂತಿ ಹರಡಿರುವ ಸಾಧ್ಯತೆಯೂ ಇದೆ. ಯಾವುದೇ ಕಾರಣಕ್ಕೂ ದ್ರಾಕ್ಷಿ ಬೆಳೆಗಾರರು ಎದೆಗುಂದಬಾರದೆಂದು ಸಂಸದ ರಮೇಶ ಜಿಗಜಿಣಗಿ ರೈತರಿಗೆ ಅಭಯ ನೀಡಿದ್ದಾರೆ.

ಗಮನ ಸೆಳೆದ ‘ವಿಜಯವಾಣಿ’ ವರದಿ

ಒಣದ್ರಾಕ್ಷಿ ಬೆಳೆಗಾರರ ಸಮಸ್ಯೆಗೆ ಸಂಬಂಧಿಸಿದಂತೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಜು. 20 ರಂದು ‘ದ್ರಾಕ್ಷಿ ಕಣಜದ ಮೇಲೆ ಚೀನಾದ ಕಾರ್ಮೋಡ’ ತಲೆ ಬರಹದಡಿ ವಿಶೇಷ ವರದಿ ಪ್ರಕಟಿಸುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು.

ಇತಿಹಾಸದಲ್ಲಿಯೇ ಕಂಡು ಕೇಳರಿಯದ ದರ ಪಡೆಯುವ ಮೂಲಕ ಬಂಪರ್ ಲಾಟರಿ ಹೊಡೆದ ಸಂತಸದಲ್ಲಿರುವಾಗಲೇ ರೈತರಿಗೆ ಚೀನಾದ ಅಕ್ರಮ ಆಮದಿನ ಗುಮ್ಮ ಕಾಡತೊಡಗಿದೆ ಎಂಬ ಆತಂಕಕಾರಿ ಸಂಗತಿಯನ್ನು ಬೆಳಕಿಗೆ ತರಲಾಗಿತ್ತು. ಈ ಕುರಿತು ಸಂಸದರು ಸಂಸತ್ ಅಧಿವೇಶನದ ವೇಳೆ ಸಚಿವರೊಂದಿಗೆ ಸಮಾಲೋಚನೆ ನಡೆಸಿರುವುದು ರೈತರ ಆತಂಕ ನಿವಾರಣೆಗೆ ಸಹಕಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net