

ಬೆಳಗಾವಿ: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಅಹಿಂದ, ಗ್ಯಾರಂಟಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸಿದೆ. ಅಲ್ಲದೆ, ವಿವಿಧ ಅಭಿವೃದ್ಧಿ ನಿಗಮಗಳಿಗೆ ಅನುದಾನ ಬಿಡುಗಡೆಗೆ ನಿರ್ಲಕ್ಷೃ ಮಾಡುತ್ತಿರುವುದರಿಂದ ಬಡವರು, ವಿದ್ಯಾರ್ಥಿಗಳು, ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರವು ಗ್ಯಾರಂಟಿ ಹೆಸರಿನಲ್ಲಿ ಎಲ್ಲ ಯೋಜನೆಗಳನ್ನು ಬಂದ್ ಮಾಡಿದೆ ಎಂದು ಕಾರ್ಯಕರ್ತರು ದೂರಿದರು.
ಹಿಂದುಳಿದ ವರ್ಗಗಳ ಜನರ ಆರ್ಥಿಕ, ಔದ್ಯೋಗಿಕ, ಕೃಷಿ, ಮತ್ತು ಶಿಕ್ಷಣಕ್ಕಾಗಿ ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 1,000 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ದಿ.ದೇವರಾಜ ಅರಸು, ಒಕ್ಕಲಿಗ, ಮರಾಠ, ವಿಶ್ವಕರ್ಮ, ವೀರಶೈವ ಲಿಂಗಾಯತ, ನಿಜಶರಣ ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಅಲೆಮಾರಿ, ಅರೆ ಅಲೆಮಾರಿ, ಮಡಿವಾಳ ಮಾಚಿ ದೇವ ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮಗಳಿಗೆ ಹಣ ಬಿಡುಗಡೆ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1,600 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆ ಮಾಡಿ ಕೇವಲ 57.04 ಕೋಟಿ ರೂ. ಮಾತ್ರ ವೆಚ್ಚ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ ದೇಶಪಾಂಡೆ, ಧನಶ್ರೀ ದೇಸಾಯಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಸಂತೋಷ ಹಡಪದ,ರೇಖಾ ಚಿನ್ನಾಕಟ್ಟಿ, ಸಚಿನಕಡಿ, ಯಲ್ಲೇಶ ಕೊಲಕಾರ, ಸಂತೋಷ ದೇಶನೂರ, ಸುಭಾಷ ಸಣ್ಣವೀರಪ್ಪನವರ, ಯುವರಾಜ ಜಾಧವ, ಧನಂಜಯ ಜಾಧವ ಇತರರಿದ್ದರು.