

ಹುಬ್ಬಳ್ಳಿ: ಆಡಳಿತದಲ್ಲಿ ಯಾವುದೇ ಪಕ್ಷವಿರಲಿ, ಅನುದಾನ ಬಿಡುಗಡೆ ಸಂಬಂಧ ಸುಭದ್ರ ವ್ಯವಸ್ಥೆ ರೂಪಿಸಬೇಕು. ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ವೇತನ ಸಹಿತ ಇತರ ಅನುದಾನವೂ ಬಿಡುಗಡೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ನೇರ ನೇಮಕಾತಿಯಡಿ ಭಾನುವಾರ ನೇಮಕಾತಿ ಆದೇಶ ಪ್ರತಿ ವಿತರಿಸಿ ಅವರು ಮಾತನಾಡಿದರು.
300 ಕೋಟಿ ರೂ. ಅನುದಾನ ಬಾಕಿ ಇದೆ ಎಂಬ ಮಾಹಿತಿ ಇದೆ. ನಾನು ರಾಜಕೀಯ ಮಾಡುವುದಿಲ್ಲ. ಸರತಿಯಾಗಿ ಬರುವ ಅನುದಾನ ತಡೆಹಿಡಿಯಬಾರದು. ಕೇಂದ್ರ ಸರ್ಕಾರದ ಹಣಕಾಸು ಆಯೋಗದಿಂದ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಅನುದಾನದಲ್ಲಿ ಹೆಚ್ಚಳ ಮಾಡಿದೆ. ಮಲ ಹೊರುವ, ಗುಂಡಿಗೆ ಇಳಿಯುವ ಅನಿಷ್ಠ ಪದ್ಧತಿಯನ್ನು ಕೇಂದ್ರ ಸರ್ಕಾರ ತೊಡೆದು ಹಾಕಿದೆ ಎಂದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನೇರ ನೇಮಕಾತಿ ಮತ್ತು ನೇರ ಸಂಬಳ ಪಾವತಿ ಬಹಳ ದಿನದ ಸಮಸ್ಯೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರವು ಪೌರ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ, ವಿದ್ಯಾಕಾಶಿ ಧಾರವಾಡದಲ್ಲಿಯೂ ನೇರ ನೇಮಕಾತಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ವಿಚಾರ ಮಂಡಿಸಲಾಗುವುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 870 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕಿತ್ತು. ಸದ್ಯ 127 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದವರನ್ನೂ ನೇಮಕ ಮಾಡಿಕೊಳ್ಳಬೇಕು. ಬಾಕಿ ಹಣ ಬಿಡುಗಡೆ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.
ಮೇಯರ್ ರಾಮಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
127 ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪ್ರತಿ ವಿತರಿಸಲಾಯಿತು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಸದಸ್ಯರಾದ ಉಮಾ ಮುಕುಂದಿ, ರೂಪಾ ಶೆಟ್ಟಿ, ಧೋರಾಜ ಮನ್ನೆಕುಂಟ್ಲ, ಅರ್ಜುನ ಪಾಟೀಲ, ಸರಸ್ವತು ಧೋಂಗಡಿ, ಪ್ರೀತಿ ಖೋಡೆ, ಆಯುಕ್ತ ಡಾ. ರುದ್ರೇಶ ಘಾಳಿ, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಇತರರು ಇದ್ದರು.
ವೇದಿಕೆ ಮೇಲೆ ಸಚಿವ, ಶಾಸಕ ‘ಮತಾಪು’: ‘ಮೂರು ತಿಂಗಳಿಂದ ಪಾಲಿಕೆ ಸಿಬ್ಬಂದಿಗೆ ವೇತನ ಬಿಡುಗಡೆ ಸಮಸ್ಯೆಯಾಗಿತ್ತು. 300 ಕೋಟಿ ರೂ. ಅನುದಾನ ಬಿಡುಗಡೆಯಾಗಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದಾಗ, ಶಾಸಕ ಪ್ರಸಾದ ಅಬ್ಬಯ್ಯ ಅವರು ‘ಯಾವುದೇ ಸಮಸ್ಯೆ ಇಲ್ಲ’ ಎಂದುತ್ತರಿಸಿದರು.
‘ಇಲ್ಲ ನನಗೆ ಗೊತ್ತಿರಲಿಲ್ಲ. ಬಿಡುಗಡೆಯಾಗಿದ್ದರೆ ಪರವಾಗಿಲ್ಲ, ಮೇಯರ್ ಹೇಳಿದ್ದರು. ಅದಕ್ಕೆ ಕಾಲಕಾಲಕ್ಕೆ ರಾಜ್ಯ ಸರ್ಕಾರ ವೇತನಾನುದಾನ ಬಿಡುಗಡೆ ಮಾಡಬೇಕು’ ಎಂದು ಜೋಶಿ ಹೇಳಿದಾಗ, ‘ರಾಜ್ಯ ಸರ್ಕಾರ ವೇತನಾನುದಾನ ಬಿಡುಗಡೆಗೆ ಮೊದಲ ಆದ್ಯತೆ ನೀಡುತ್ತಿದೆ’ ಎಂದು ಶಾಸಕ ಅಬ್ಬಯ್ಯ ತಿಳಿಸಿದರು. ಪಕ್ಕದಲ್ಲಿದ್ದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹೌದೆಂದು ತಲೆ ಅಲ್ಲಾಡಿಸಿದರು. ವೇದಿಕೆ ಮೇಲೆ ಶಾಸಕ, ಸಚಿವರ ಮಧ್ಯೆ ಹೀಗೆ ‘ಮತಾಪು’ ಹೊರಬಂದವು.