

ಎಚ್.ಡಿ. ಕೋಟೆ: ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಜೀತ ವಿಮುಕ್ತರ ಆರ್ಥಿಕ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಅಧ್ಯಕ್ಷ ಶಿವಣ್ಣ ಯಲಮತ್ತೂರು ಒತ್ತಾಯಿಸಿದರು.
ರಾಜ್ಯದಲ್ಲಿ 7 ಸಾವಿರ ಮಂದಿ ಜೀತ ವಿಮುಕ್ತರಿದ್ದು, ಇವರಿಗೆ ಸರ್ಕಾರ ಯಾವುದೇ ವಿಧವಾದ ಅನುದಾನಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಸ್‌ಒಪಿ ನಿಯಮದಡಿ ಜೀತವಿಮುಕ್ತರಿಗೆ 7,200 ರೂ.ಗಳಂತೆ ಮಾಸಾಸನ ನೀಡಬೇಕು, ಮರುವಸತಿ ಕಲ್ಪಿಸಬೇಕು ಎಂದು ನಿಯಮವಿದ್ದರೂ ಈ ನಿಯಮವನ್ನು ಸರ್ಕಾರ ಗಾಳಿಗೆ ತೂರಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ 2001ರಿಂದ 2012ರ ವರಗೆ 753 ಜೀತದಾಳುಗಳನ್ನು ಬಿಡುಗಡೆ ಮಾಡಿ ತಲಾ 20 ಸಾವಿರ ರೂ. ಪರಿಹಾರ ಮತ್ತು 7,200 ರೂ. ಮಾಸಾಶನ ನೀಡಿದ್ದಾರೆ. 2014ರಿಂದ 2024ರವರೆಗೆ 258 ಮಂದಿ ಜೀತದಾಳುಗಳನ್ನು ಬಿಡುಗಡೆ ಮಾಡಿ 163 ಜನರಿಗೆ ತಲಾ ಒಂದು ಸಾವಿರ ರೂ. ತಾತ್ಕಾಲಿಕ ಪರಿಹಾರ ಹಾಗೂ 95 ಜನರಿಗೆ 5,000 ರೂ. ಗಳ ತಾತ್ಕಾಲಿಕ ಪರಿಹಾರ ನೀಡಿದ್ದಾರೆ.
ಆದರೆ 35 ಜನರಿಗೆ ತಾತ್ಕಾಲಿಕ ಪರಿಹಾರ ನೀಡಿಲ್ಲ. 49 ಮಂದಿಗೆ ಮಾಸಾಶನ ನೀಡಿಲ್ಲ. ಸಂಪೂರ್ಣವಾಗಿ 258 ಮಂದಿಗೆ ಪರಿಹಾರ ಕಲ್ಪಿಸಿಲ್ಲ. 550 ಮಂದಿಗೆ ಮನೆಯನ್ನೂ ಮಂಜೂರು ಮಾಡಿಲ್ಲ. ಇದನ್ನೆಲ್ಲ ಮನಗಂಡು ಪ್ರಶ್ನಿಸಿದರೆ ಹಣ ಇಲ್ಲ ಎಂಬ ಉತ್ತರಗಳು ಕೇಳಿಬರುತ್ತಿದೆ. ಇನ್ನಾದರೂ 2025-26ನೇ ಸಾಲಿನ ಬಜೆಟ್‌ನಲ್ಲಿ 500 ಕೋಟಿ ರೂ. ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಮೇಲಿನ ಎಲ್ಲ್ಲ ಒತ್ತಾಯಗಳನ್ನು ಈಡೇರಿಸುವಂತೆ ಫೆ.18ರಂದು ಪಟ್ಟಣದ ಅಂಬೇಡ್ಕರ್ ಭವನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಒಕ್ಕೂಟದ ಪದಾಧಿಕಾರಿಗಳಾದ ಮಹದೇವ, ಮಂಜುನಾಥ್, ಮಲ್ಲಿಗಮ್ಮ, ಪುಟ್ಟರಾಜಯ್ಯ, ಗೋಪಾಲ್, ಜೀವಿಕಾ ಉಮೇಶ್, ಜೀವಿಕಾ ಬಸವರಾಜು ಇದ್ದರು.