

ಕಂಪ್ಲಿ: ಇಲ್ಲಿನ ಕೋಟೆಯ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಾಣಕ್ಕೆ ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲ. ಬಜೆಟ್‌ನಲ್ಲಿಯೂ ಸಹ ಸೇತುವೆ ನಿರ್ಮಾಣ ಪ್ರಸ್ತಾಪವಾಗಿಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ಸ್ಪಷ್ಟಪಡಿಸಿದರು.
ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ 2022-23ನೇಸಾಲಿನ 5,054ರ ಅಪೆಂಡಿಕ್ಸ್ ಅನುದಾನದಡಿ 4.50ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ, ಸೇತುವೆ ನಿರ್ಮಾಣಕ್ಕಾಗಿ 69ಕೋಟಿ ರೂ. ಬಿಡುಗಡೆಗೊಂಡಿದೆ ಎನ್ನುವುದು ಸುಳ್ಳು. 15ನೇ ವಿಧಾನಸಭೆಯ ಅವಧಿಯಲ್ಲಿ ಕಂಪ್ಲಿ,
ಕುರುಗೋಡುಗಳಲ್ಲಿ ಆಡಳಿತಸೌಧ, 100ಹಾಸಿಗೆ ಆಸ್ಪತ್ರೆ, ಪಿಯು ಕಾಲೇಜು ಸೌಲಭ್ಯ ದೊರೆತಿದ್ದು ನನಗೆ ತೃಪ್ತಿ ತಂದಿದ್ದು, ಕ್ಷೇತ್ರದಲ್ಲಿ ಶೇ.50ಕ್ಕೂ ಹೆಚ್ಚು ಅಭಿವೃದ್ಧಿಗೆ ಚಾಲನೆ ದೊರೆತಿದೆ. ಆದರೆ ಸಾಮಾನ್ಯರ ವಸತಿ ಯೋಜನೆಯಲ್ಲಿ ಮನೆಗಳು ಬಂದಿಲ್ಲ ಎಂದು ದೂರಿದರು.
ಎರಡು ವರ್ಷ ಕರೊನಾದಿಂದ ಅಭಿವೃದ್ಧಿ ಸಾಧಿಸಲಾಗಲಿಲ್ಲ. ಕೇವಲ 3ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಎಚ್‌ಎಲ್‌ಸಿಯ ಡಿ3ರಿಂದ ಡಿ14ರತನಕ ನಾಲೆಗಳಿಗೆ ಏತನೀರಾವರಿ ಮೂಲಕ ಕಡೆಅಂಚಿನ ಭೂಮಿಗೆ ಸಮರ್ಪಕ ನೀರನ್ನು ಒದಗಿಸುವುದು, ಕ್ಷೇತ್ರದಲ್ಲಿನ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವುದು ಸೇರಿ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ನಾನಾ ಅಭಿವೃದ್ಧಿ ಯೋಜನೆಗಳನ್ನು ಮುಂದಿನ ಅವಧಿಯಲ್ಲಿ ನೆರವೇರಿಸುತ್ತೇನೆ. ಮುಂದಿನ ಹದಿನೈದು ದಿನಗಳಲ್ಲಿ ನನ್ನ ಅವಧಿಯಲ್ಲಿನ ಕ್ಷೇತ್ರದ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸುತ್ತೇನೆ ಎಂದರು.
ಪಿಡಿಒ ಸಾವಿತ್ರಿ ಗೌರೋಜಿ, ಗ್ರಾಪಂ ಸದಸ್ಯರಾದ ನಾಯಕರ ವೆಂಕೋಬಾ, ಮೌನೇಶ್, ಪ್ರಮುಖರಾದ ಕರೆಪ್ಪ, ಕೆ.ಷಣ್ಮುಖಪ್ಪ, ತಳವಾರ ನಾಗಪ್ಪ, ದೊಡ್ಡ ನಾಯಕ, ವಿರುಪಣ್ಣ, ಕೋರಿ ಚನ್ನಬಸವ, ಗುಜ್ಜಲ ಹನುಮಂತಪ್ಪ, ಪಿ.ಪಂಪಣ್ಣ, ಸೂಗೂರು ಶೇಖರಪ್ಪ, ಶಿವಕುಮಾರ್, ಕೆರೆಕೆರೆ ಅಂಜಿನಪ್ಪ ಇತರರಿದ್ದರು.