ಕಾಲುವೆಗಳ ಅಭಿವೃದ್ಧಿಗೆ ಅನುದಾನ

NARENDRA
Published on

*ಶಾಸಕ ಆರ್.ನರೇಂದ್ರ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭರವಸೆ

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದ ಕಾಲುವೆಗಳ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಶಾಸಕ ಆರ್.ನರೇಂದ್ರ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದರು.

ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಮಾತನಾಡಿದ ಅವರು, ಗುಂಡಾಲ್ ಜಲಾಶಯವನ್ನು 1980ರಲ್ಲಿ ನಿರ್ಮಿಸಲಾಗಿದ್ದು, 15 ಸಾವಿರ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಸೌಕರ್ಯ ಒದಗಿಸುವ ಸಲುವಾಗಿ ಎಡ ಹಾಗೂ ಬಲದಂಡೆ ನಾಲೆಯನ್ನು ಹೊಂದಿದೆ. ಈ ಹಿಂದೆ ಮಳೆಯಿಲ್ಲದ ಪರಿಣಾಮ ಜಲಾಶಯದಲ್ಲಿ ನೀರಿನ ಸಂಗ್ರಹಣಾ ಪ್ರಮಾಣ ಕಡಿಮೆ ಇತ್ತು. ಆದರೆ ಇದೀಗ ಕಳೆದ 2 ವರ್ಷದಿಂದ ಜಲಾಶಯ ಭರ್ತಿಗೊಂಡು ಕೋಡಿ ಬಿದ್ದಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಕಾಲುವೆಗಳಲ್ಲಿ ಹೂಳು ತುಂಬಿದೆ. ಕೆಲವು ಕಡೆಗಳಲ್ಲಿ ಶಿಥಿಲಗೊಂಡಿದೆ. ಇದರಿಂದ 12 ಸಾವಿರ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಸೌಕರ್ಯವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾಲುವೆಗಳ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಇದಕ್ಕೆ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ಗುಂಡಾಲ್ ಜಲಾಶಯ ಇದುವರೆಗೂ 4 ಬಾರಿ ಭರ್ತಿಯಾಗಿದೆ. ಕಾಲುವೆಗಳ ನಿರ್ವಹಣೆಗಾಗಿ ಕಳೆದ 5 ವರ್ಷದಿಂದ ವಿವಿಧ ಲೆಕ್ಕ ಶೀರ್ಷಿಕೆಯಡಿ 90 ಲಕ್ಷ ರೂ. ಅನುದಾನ ನೀಡಲಾಗಿದೆ. ಆದರೆ ಕೆಲವು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇತ್ತು. ಇದರಿಂದ ಕಾಲುವೆಗಳಲ್ಲಿ ನೀರು ಹರಿಯಲಿಲ್ಲ. ಹೀಗಾಗಿ ಕಾಲುವೆಗಳಲ್ಲಿ ಹೂಳು ತುಂಬಿದೆ. ಕೆಲವು ಕಡೆಗಳಲ್ಲಿ ದುರಸ್ತಿ ಕಾರ್ಯ ಆಗಬೇಕಿರುವುದು ಗಮನಕ್ಕೆ ಬಂದಿದೆ. ಕಾಲುವೆಗಳ ದುರಸ್ತಿಗಾಗಿ ಅನುದಾನ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಚೇರಿಗಳ ಪ್ರಾರಂಭ ಭರವಸೆ: ಹನೂರು ತಾಲೂಕಿನಲ್ಲಿ ವಿವಿಧ ಇಲಾಖೆಗಳ ಕಚೇರಿ ಸ್ಥಾಪನೆ ಸಂಬಂಧ ಶಾಸಕ ಆರ್.ನರೇಂದ್ರ ಅವರು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ತಹಸೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಅಗ್ನಿಶಾಮಕ ಠಾಣೆ ಹಾಗೂ ಸೆಸ್ಕ್ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಇನ್ನುಳಿದ ತಾಲೂಕು ಮಟ್ಟದ ಕಚೇರಿಗಳನ್ನು ಪ್ರಾರಂಭಿಸಲು ಆರ್ಥಿಕ ಇಲಾಖೆಯ ಅನುಮತಿಯೊಂದಿಗೆ ಹುದ್ದೆಗಳನ್ನು ಸೃಜಿಸಿ ಹಂತ ಹಂತವಾಗಿ ಕಚೇರಿಗಳನ್ನು ಪ್ರಾರಂಭಿಸಲು ಎಲ್ಲ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗೆ ಸೂಕ್ತ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಆಡಳಿತಸೌಧ ನಿರ್ಮಾಣಕ್ಕೆ ಕ್ರಮ: ಹನೂರು ತಾಲೂಕಿನಲ್ಲಿ ಆಡಳಿತ ಸೌಧ ನಿರ್ಮಿಸಲು ಹುಲ್ಲೇಪುರ ಗ್ರಾಮದ ಸರ್ವೇ ನಂಬರ್ 312/ಡಿ ರಲ್ಲಿ 7.76 ಎಕರೆ ಹಾಗೂ 312/ಇ ರಲ್ಲಿ 1.17 ಎಕರೆ ಸೇರಿದಂತೆ ಒಟ್ಟು 8.93 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಸೌಧ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಖ್ಯ ವಾಸ್ತುಶಿಲ್ಪಿಯಿಂದ 2 ಮಾದರಿ ನೀಲಿನಕ್ಷೆಯು ಪರಿಶೀಲನಾ ಹಂತದಲ್ಲಿದೆ. ಅನುಮೋದನೆಗೊಂಡ ಬಳಿಕ ಜಿಲ್ಲಾಧಿಕಾರಿ ಅವರ ಸೂಕ್ತ ಪ್ರಸ್ತಾವನೆಯನ್ನು ಪಡೆದು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವ ಆರ್.ಅಶೋಕ್ ಉತ್ತರಿಸಿದರು.

ದೇಗುಲದ ಅಭಿವೃದ್ಧಿಗೆ ಅನುದಾನ: ಮುಜರಾಯಿ ಮತ್ತು ಮುಜರಾಯಿಯೇತರ ದೇಗುಲ ಸಂಬಂಧ ಶಾಸಕ ಆರ್.ನರೇಂದ್ರ ಕೇಳಿದ ಪ್ರಶ್ನೆಗೆ ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 86 ಅಧಿಸೂಚಿತ ದೇಗುಲಗಳಿವೆ. ಇದರಲ್ಲಿ ಮುಜರಾಯಿಯೇತರ ದೇಗುಲಗಳು ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡದೆ ಇರುವುದರಿಂದ ಮಾಹಿತಿ ಇಲ್ಲ. ಕ್ಷೇತ್ರದ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಕಳೆದ 3 ವರ್ಷದ ಅವಧಿಯಲ್ಲಿ 1.02 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಜಿಲ್ಲಾಧಿಕಾರಿ ಅವರು ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಿರುತ್ತಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net