ಒಂದು ತಿಂಗಳಲ್ಲಿ ಸೊರಬ ರಸ್ತೆ ವಿಸ್ತರಣೆ

3 sgr 6
Published on

ಸಾಗರ: ಸೊರಬ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಒಂದು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಸೊರಬ ರಸ್ತೆಯ ಕೆ.ಎಂ.ಲಿಂಗಪ್ಪ ಅವರ ಮನೆಯಿಂದ ಗುಡ್ಡೆಕೌತಿವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ರಸ್ತೆ ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಸೂಚಿಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ನಗರವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ದುರ್ಗಾಂಬಾ ವೃತ್ತದ ರೈಲ್ವೆಗೇಟ್​ನಿಂದ ಶಿವಪ್ಪನಾಯಕ ವೃತ್ತದವರೆಗಿನ ಸೊರಬ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಈಗಾಗಲೇ ಹೆಚ್ಚಿನ ಅನುದಾನ ನೀಡಲು ಸಿಎಂಗೆ ಮನವಿ ಮಾಡಲಾಗಿದ ಎಂದರು.

ಗಣಪತಿ ಕೆರೆ ಕೆಳಭಾಗದ ಚಂದ್ರಮಾವಿನಕೊಪ್ಪಲು ಗ್ರಾಮದ ಖಾಸಗಿ ಜಮೀನು ಭೂ ಸ್ವಾಧೀನಕ್ಕೆ ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡಿದೆ. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವುದು, ನಗರ ವ್ಯಾಪ್ತಿಯಲ್ಲಿ ವಸತಿ ಇಲಾಖೆಯಿಂದ ಗೃಹ ಸಮುಚ್ಚಯ ನಿರ್ವಿುಸಲು 5 ಎಕರೆ ಕಂದಾಯ ಭೂಮಿ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಉದ್ದೇಶಿತ ಜಾಗದಲ್ಲಿ ಬಡವರಿಗೆ ಮನೆ ನಿರ್ವಿುಸಿಕೊಡಲು ಅಗತ್ಯ ಸಹಕಾರ ನೀಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕೆಲವೆಡೆ ಕಂದಾಯ ಮತ್ತು ನಗರಸಭೆ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಅದನ್ನು ಬಡವರಿಗೆ ಮಾರಾಟ ಮಾಡಲಾಗುತ್ತಿದೆ. ಜಾಗಕ್ಕೆ ಸಂಬಂಧಿಸಿ ಅನಧಿಕೃತ ದಾಖಲೆ ಸೃಷ್ಟಿಸಿ ಅದನ್ನು ಬಡವರಿಗೆ ಮಾರಾಟ ಮಾಡಲಾಗುತ್ತಿದೆ. ಯಾರೂ ಇಂತಹ ನಿವೇಶನ ಖರೀದಿಸಬಾರದು ಎಂದರು.

ಒಂದೊಮ್ಮೆ ಅನಧಿಕೃತವಾಗಿ ನಿಮಗೆ ಜಾಗ ಮಾರಾಟ ಮಾಡಿರುವ ಬಗ್ಗೆ ನನಗೆ ಅಥವಾ ಪೊಲೀಸ್ ಇಲಾಖೆಗೆ ದೂರು ನೀಡಿದರೆ ನೀವು ನೀಡಿದ ಹಣ ವಾಪಸ್ ಕೊಡಿಸುವ ಬಗ್ಗೆ ಗಮನಹರಿಸಲಾಗುತ್ತದೆ. ಜತೆಗೆ ನಿವೇಶನ ಹಾಗೂ ಮನೆ ಇಲ್ಲದವರಿಗೆ ನಿವೇಶನ ನೀಡಿ ಮನೆ ಕಟ್ಟಿಕೊಡಲಾಗುತ್ತದೆ. ಶೀಘ್ರ ಆಶ್ರಯ ನಿವೇಶನ ಹಂಚಿಕೆ ಸಂಬಂಧ ಅರ್ಜಿ ಕರೆಯಲಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಎಸಿ ಡಾ. ಎಲ್.ನಾಗರಾಜ್, ತಹಸೀಲ್ದಾರ್ ಚಂದ್ರಶೇಖರ್ ನಾಯಕ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಡಿವೈಎಸ್ಪಿ ವಿನಾಯಕ್ ಶೆಟಿಗೇರ್, ವಿವಿಧ ಇಲಾಖೆಯ ಕೆ.ದಿನೇಶ್, ವಿನಯ್ ಕುಮಾರ್, ಡಿ.ಆರ್.ಪ್ರಮೋದ್, ಭೀಮೇಶ್, ಶ್ರೀಧರ್, ರಂಗನಾಥ್, ತುಕಾರಾಮ್ ಸಾಗರಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net