

ಮೈಸೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಬಿ.ಇ./ಬಿ.ಟೆಕ್. ಪ್ರವೇಶ ಪ್ರಕ್ರಿಯೆ ನಡೆದು ನಂತರ ಖಾಲಿ ಉಳಿಯುವ ಸೀಟುಗಳನ್ನು ಸಂಸ್ಥೆಯ ಹಂತದಲ್ಲಿಯೇ ಪ್ರದೇಶಾತಿ ನೀಡಲು ಅನುಮತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಆಯಾಯಾ ಪ್ರದೇಶದ ಸ್ಥಳೀಯ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ಪ್ರಥಮ ವರ್ಷ ಬಿ.ಇ./ಬಿ.ಟೆಕ್‌ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕೌನ್ಸಿಲಿಂಗ್ ನಡೆದು, ತದನಂತರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸೀಟು ಖಾಲಿ ಉಳಿಯುವುದು ಕಂಡು ಬಂದಿರುತ್ತದೆ ಎಂದು ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ಈ ರೀತಿ ಖಾಲಿ ಉಳಿಯುವ ಸೀಟುಗಳನ್ನು ಖಾಸಗಿ/ಖಾಸಗಿ ಅನುದಾನಿತ ಸಂಸ್ಥೆಗಳ ಹಂತದಲ್ಲಿಯೇ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದರಿಂದ ಸ್ಥಳೀಯ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಖಾಲಿ ಉಳಿಯುವ ಸೀಟುಗಳಿಗೆ ಪ್ರವೇಶ ಪಡೆಯಲು ಅವಕಾಶವಾಗದೆ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 2016-17ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕೌನ್ಸಿಲಿಂಗ್ ನಂತರ ಉಳಿಯುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟುಗಳನ್ನು ಸಂಸ್ಥೆಯ ಪ್ರಾಂಶುಪಾಲರ ಹಂತದಲ್ಲಿಯೇ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದ್ದು, ಇಲ್ಲಿಯವರೆಗೂ ಈ ರೀತಿ ಯಾವುದೇ ಅನುಮತಿ ನೀಡಿರುವುದಿಲ್ಲ. ಸ್ಥಳೀಯ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು 2022-23ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕೌನ್ಸಿಲಿಂಗ್ ನಂತರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಳಿಯುವ ಸೀಟುಗಳನ್ನು ಸಂಸ್ಥೆಯ ಪ್ರಾಂಶುಪಾಲರ ಹಂತದಲ್ಲಿಯೇ ಭರ್ತಿ ಮಾಡಲು ಅನುಮತಿ ನೀಡಬೇಕು ಎಂದು ಉನ್ನತ ಶಿಕ್ಷಣ, ಐ.ಟಿ, ಅಂಡ್ ಬಿ.ಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಸಚಿವರನ್ನು ಪ್ರಕಟಣೆಯಲ್ಲಿ ಒತ್ತಾಯಿದ್ದಾರೆ.