ಗ್ರಂಥಮಿತ್ರ ಒಡಂಬಡಿಕೆ ಹಸ್ತಾಂತರ - ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ

PTR_17 AUG_1
Published on


ಪುತ್ತೂರು: ರಾಷ್ಟ್ರೀಯ ಗ್ರಂಥಪಾಲಕರ ದಿನದ ಅಂಗವಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗ್ರಂಥಪಾಲಕರ ಸಮಾವೇಶದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಪುತ್ತೂರು ಆಕಾಂಕ್ಷಾ ಚಾರಿಟೆಬಲ್ ಟ್ರಸ್ಟ್ ನಡುವಿನ ಮೂರು ವರ್ಷದ ಒಡಂಬಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕಾಂಕ್ಷಾ ಚಾರಿಟೆಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಶ್ರೀಶ ಬೈಪದವು ಅವರಿಗೆ ಹಸ್ತಾಂತರಿಸಿದರು.


ಮೂರು ವರ್ಷ ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರಗಳಲ್ಲಿ ’ಗ್ರಂಥ ಮಿತ್ರ’ ಎಂಬ ಕಾರ್ಯಕ್ರಮದಡಿ ಪ್ರತಿ ಶನಿವಾರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಾಲೇಜು ಸ್ವಯಂಸೇವಕರು ತರಬೇತಿ ನೀಡಬೇಕಾಗಿದೆ. ಈ ಮೂಲಕ ಮಕ್ಕಳ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವ ಕಾರ್ಯ ನಡೆಯಲಿದೆ. ಕಾರ್ಯಕ್ರಮ ೨೦೨೧ರಲ್ಲಿ ಪ್ರಾರಂಭವಾಗಿ ಮೂರು ಜಿಲ್ಲೆಗಳ ೧೦೦ಕ್ಕೂ ಹೆಚ್ಚು ಅರಿವು ಕೇಂದ್ರಗಳಲ್ಲಿ ನಿರ್ವಹಣೆಯಲ್ಲಿದ್ದು, ೨೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ೭೦೦ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದಾರೆ.


ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net