ನಿಗಮ ಮಂಡಳಿಗೆ ಅನುದಾನ ಕಲ್ಪಿಸಿ

20 CRP- 3A
Published on

ಚನ್ನರಾಯಪಟ್ಟಣ : ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರಚನೆ ಮಾಡಿರುವ ಜಾತಿ ಆಧಾರಿತ ನಿಗಮ ಮಂಡಳಿಗಳು ಅನುದಾನ ಕೊರತೆಯಿಂದ ಸೊರಗುತ್ತಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.


ತಾಲೂಕು ಆಡಳಿತದಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವ ಶರಣ ನುಲಿಯ ಚಂದಯ್ಯ, ಶ್ರೀ ನಾರಾಯಣ ಗುರು ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನುದಾನ ಕೊರತೆಯಿಂದ ಬಳಲುತ್ತಿರುವ ನಿಗಮ ಮಂಡಳಿಗಳಿಗೆ ಸರ್ಕಾರ ಈಗಲಾದರೂ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.


ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರು ಸಮಾಜದಲ್ಲಿ ಸಮಾನತೆ ಸಾರಿ ಶೋಷಿತರಿಗೆ ಶಕ್ತಿ ತುಂಬಿ ಮೇಲೆತ್ತಿದವರು. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ತರುವ ಮೂಲಕ ಬಡವರಿಗೆ ಭೂಮಿ ಕಲ್ಪಿಸಿದರು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದು ಸ್ಮರಿಸಿದರು.


ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದವರ, ಶೋಷಿತರ ಧ್ವನಿಯಾಗಿದ್ದರು. ಅವರು ಅಸ್ಪಶ್ಯತೆ ನಿರ್ಮೂಲನೆಗಾಗಿ ಪಣತೊಟ್ಟಿದ್ದರು. ಅವರ ವಿಶ್ವಮಾನವೀಯ ತತ್ವಗಳು ನಮಗೆಲ್ಲರಿಗೂ ದಾರಿದೀಪವಾಗಿದೆ. ಅವರು ಮನುಜ ಕುಲಕ್ಕೆ ನೀಡಿದ ವಿಶ್ವಮಾನವ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಜಗತ್ತಿಗೆ ಅವರ ಸಂದೇಶಗಳನ್ನು ಸಾರಬೇಕಾಗಿದೆ ಎಂದರು.


ಬಸವಣ್ಣ ಅವರ ಸಮಕಾಲೀನರಾದ ನುಲಿಯ ಚಂದಯ್ಯ ಅವರು, ಕಾಯಕದ ಮೂಲಕವೇ ಉನ್ನತಿ ಕಂಡವರು. ಹಗ್ಗ ನೇಯುವ ಕಾಯಕದಿಂದ ಬಂದ ಹಣದಿಂದ ದಾಸೋಹ ನಡೆಸಿದ ಶಿವಶರಣರಾಗಿದ್ದರು. ಬಸವ ಕಲ್ಯಾಣಕ್ಕೆ ಆಗಮಿಸಿದ ಇವರು ಕಾಯಕ ತತ್ವವನ್ನು ಜನಮಾನಸದಲ್ಲಿ ಬಿತ್ತುವುದರ ಮೂಲಕ ದುಡಿಯುವ ವರ್ಗಕ್ಕೆ ಅನುವು ಮಾಡಿಕೊಟ್ಟವರು ಎಂದು ತಿಳಿಸಿದರು.


ಉಪನ್ಯಾಸಕ ರತ್ನಾಕರ್ ಡಿ.ದೇವರಾಜ ಅರಸು ಜೀವನ ಕುರಿತು ಪ್ರಧಾನ ಭಾಷಣ ಮಾಡಿದರು. ತಹಸೀಲ್ದಾರ್ ವಿ.ಎಸ್.ನವೀನ್ ಕುಮಾರ್, ಈಡಿಗ ಸಮಾಜದ ಮುಖಂಡರಾದ ಮಂಜಣ್ಣ, ವೆಂಕಟೇಶ್, ಹನುಮೇಗೌಡ, ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net