ಡಾ.ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ಅನುದಾನ; ಪುನರ್ ಪರಿಶೀಲಿಸುವಂತೆ  ಸಚಿವ ಲಾಡ್ ಸೂಚನೆ

lllad (1)
Published on

ಬೆಂಗಳೂರು: ಹುಬ್ಬಳ್ಳಿಯಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು ಪುನರ್ ಪರಿಶೀಲಿಸುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.

ವಿಕಾಸ ಸೌಧದಲ್ಲಿ ಈ ಕುರಿತು ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಗಂಬೂಬಾಯಿ ಹಾನಗಲ್ ಗುರುಕುಲದ ನಿರ್ವಹಣೆ ಮತ್ತು ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಗುರುಕುಲ ಆರ್ಥಿಕ ಕಾರಣಕ್ಕೆ ಸ್ಥಗಿತಗೊಳ್ಳುವಂತಾಗಬಾರದು. ಅನುದಾನ ಬಿಡುಗಡೆಗೆ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹಿಂದೆ ಈ ಗುರುಕಲುದಲ್ಲಿ 101 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದುವರೆಗೆ 8.42 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಹಣ ಖರ್ಚಾಗಿರುವ ಬಗ್ಗೆ ಯಾವುದೇ ಆಡಿಟ್ ಆಗಿಲ್ಲ. ಅಲ್ಲದೆ, ಗುರುಕುಲ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು ಸರ್ಕಾರದ ಪ್ರಸ್ತುತ ನಿಯಮಾವಳಿಗಳಲ್ಲಿ ಅವಕಾಶಗಳಿಲ್ಲ. ಹೀಗಾಗಿ ಅನುದಾನ ಬಿಡುಗಡೆ ತಡೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳೇ ತೀರ್ಮಾನ ತೆಗೆದುಕೊಂಡು ಅನುದಾನ ತಡೆ ಹಿಡಿದರೆ ಹೇಗೆ? ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಪಡೆಯುವುದು ಬೇಡವೆ? ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳನ್ನು ಒಳಗೊಂಡ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಳಿಗೆ ಸಂತೋಷ್ ಲಾಡ್ ಸೂಚಿಸಿದರು.

ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ವಿ. ಬೆಟ್ಟಕೋಟೆ, ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ಆರ್ಥಿಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net