ಅಂಬೇಡ್ಕರ್ ಭವನಕ್ಕೆ ಶೀಘ್ರ ಅನುದಾನ ಬಿಡುಗಡೆ

IMG-20250608-WA0225
ಸಾಲಿಗ್ರಾಮ ತಾಲೂಕಿನ ಕರ್ತಾಳು ಗ್ರಾಮದಲ್ಲಿ ಶ್ರೀ ಚಿಕ್ಕಮ್ಮತಾಯಿ, ಶ್ರೀ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಕೆ.ಎಲ್.ಶಿವಣ್ಣ, ಕಂಠಿಕುಮಾರ್ ಇತರರು ಇದ್ದರು.
Published on

ಸಾಲಿಗ್ರಾಮ: ಅಂಬೇಡ್ಕರ್ ಸಮುದಾಯ ಭವನ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಕರ್ತಾಳು ಗ್ರಾಮದಲ್ಲಿ ಶ್ರೀ ಚಿಕ್ಕಮ್ಮತಾಯಿ, ಶ್ರೀ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಮುಖ್ಯರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ತುರ್ತಾಗಿ ಆಗಬೇಕಾದ ಕೆಲಸಗಳ ಬಗ್ಗೆ ಪಟ್ಟಿ ನೀಡಿದರೆ ಹಂತ, ಹಂತವಾಗಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಶ್ರೀ ಹುಚ್ಚಮ್ಮ ತಾಯಿ ದೇವಸ್ಥಾನ ಮರು ನಿರ್ಮಾಣಕ್ಕೆ 5 ಲಕ್ಷ ರೂ.ನಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಕರ್ತಾಳು ಗ್ರಾಮದಲ್ಲಿ ನಿರೀಕ್ಷೆ ಮಾಡದಷ್ಟು ಮತಗಳನ್ನು ನೀಡಿ ನನ್ನನ್ನು ಶಾಸಕರನ್ನಾಗಿ ಮಾಡಿದ್ದೀರಿ. ಎಲ್ಲರ ಋಣ ತೀರಿಸುವುದು ನನ್ನ ಜವಾಬ್ದಾರಿಯಾಗಿದೆ. ಈಗಾಗಲೇ ಸಾಕಷ್ಟು ಕಾಮಗಾರಿಗಳನ್ನು ಕರ್ತಾಳು ಗ್ರಾಮಕ್ಕೆ ನೀಡಲಾಗಿದೆ ಎಂದು ಹೇಳಿದರು.

ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾರೂ ಯಾವುದೇ ಪಕ್ಷ, ಜಾತಿಯನ್ನು ಮಾಡದೆ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಮಾಡುವುದು ಅವರವರ ಜವಾಬ್ದಾರಿ. ಹಾಗಾಗಿ ಸಾರ್ವಜನಿಕರಿಗೆ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ನನ್ನ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.

ಶ್ರೀ ಚಿಕ್ಕಮ್ಮತಾಯಿ. ಹಾಗೂ ಮಾರಮ್ಮ ತಾಯಿಗೆ ಶಾಸಕ ಡಿ.ರವಿಶಂಕರ್ ವಿಶೇಷ ಪೂಜೆ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಕಾಂಗ್ರೆಸ್ ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ಕಂಠಿಕುಮಾರ್, ವಿಎಸ್‌ಎಸ್ ಅಧ್ಯಕ್ಷ ಮಾದೇವಪ್ಪ, ಗ್ರಾಮದ ಯಜಮಾನರಾದ ಅಣ್ಣಯ್ಯ, ಗಣೇಶ್, ನಿವೃತ್ತ ಶಿಕ್ಷಕ ಕೆ.ಎಲ್.ಶಿವಣ್ಣ, ಪುಟ್ಟಯ್ಯ, ಸುಬ್ಬಯ್ಯ, ಬಸವರಾಜ್, ಭಾಗ್ಯಾ, ಜಗದೀಶ್, ರುದ್ರೇಶ, ಪ್ರಭಾಕರ್, ಅಬ್ದುಲ್, ರವಿ, ಲೋಕೇಶ್, ರಮೇಶ್, ಪ್ರಸನ್ನ, ನಾಗಯ್ಯ, ಮಹೇಶ್, ಸೋಮಶೇಖರ್, ಸಣ್ಣಯ್ಯ, ಸ್ವಾಮಯ್ಯ, ಮಂಜು, ಸಣ್ಣತಮ್ಮಯ್ಯ, ಹನಸೋಗೆ ಸಿದ್ದಯ್ಯ, ನವೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net