ಮೂಲ ವಾರಸುದಾರರಿಗೆ ಭೂಮಿ ಹಕ್ಕುಪತ್ರ ಕೊಡಿಸಿ

mysore
Published on

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಜನರಿಗೆ ಸೇರುವ ಭೂಮಿಯನ್ನು ಕೆಲ ದುಷ್ಕರ್ಮಿಗಳು ಕಬಳಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದು, ಅಂತಹವರನ್ನು ಗುರುತಿಸಿ ಮೂಲ ವಾರಸುದಾರರಿಗೆ ಭೂಮಿಯ ಹಕ್ಕುಪತ್ರ ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.


ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ಸಾಲಿಗ್ರಾಮದ ದೌರ್ಜನ್ಯ ಪ್ರಕರಣ, ಚುಂಚನಕಟ್ಟೆ ಅಲೆಮಾರಿಗಳಿಗೆ ಹಕ್ಕುಪತ್ರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಕೊಳವೆಬಾವಿ ಕೊರೆಸುವಾಗ ಹಾನಿ, ಎಚ್.ಡಿ. ಕೋಟೆ ತಾಲೂಕಿನ ಕಾಳನಹುಂಡಿ ಗ್ರಾಮದ ನಂಜರಾಜ ಭೋವಿ ಮೇಲೆ ಸವರ್ಣೀಯ ಜನಾಂಗದವರಿಂದ ದೌರ್ಜನ್ಯ ಪ್ರಕರಣದ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಚರ್ಚಿಸಿದರು.

ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಫಲಾನುಭವಿಗಳಿಗೆ ಉಪಯೋಗವಾಗುವಂತೆ ಮಾಡಬೇಕು. ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಆದ 60 ದಿನಗಳೊಳಗೆ ಆರೋಪಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು. ಸರಿಯಾದ ಸಮಯಕ್ಕೆ ಪರಿಹಾರವನ್ನು ಮಂಜೂರು ಮಾಡಲು ಕ್ರಮ ವಹಿಸಬೇಕು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಮೈಸೂರು ಉಪವಿಭಾಗಾಧಿಕಾರಿ ರಕ್ಷಿತ್, ಹುಣಸೂರು ಉಪವಿಭಾಗಾಧಿಕಾರಿ ರುಚಿ ಜಿಂದಾಲ್, ಡಿಸಿಪಿ ಜಾಹ್ನವಿ, ಎಎಸ್‌ಪಿ ನಂದಿನಿ, ಸಮಿತಿಯ ಸದಸ್ಯರಾದ ಜೆ.ಚಿಕ್ಕಜವರಯ್ಯ, ಎನ್.ಟಿ.ರವಿಕುಮಾರ್, ಎಚ್.ಭಾಗ್ಯಾ, ವೇಣುಗೋಪಾಲ್, ಎಸ್.ಬಸವರಾಜು, ಮಹದೇವ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net