

ಚಿಕ್ಕಮಗಳೂರು: ಕರೊನಾದಿಂದ ಜಿಪಂಗೆ ಅನುದಾನದ ಕೊರತೆ ಆಗಿರುವುದರಿಂದ ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚು ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ ಹೇಳಿದರು.
ನಗರದ ವೀರಶೈವ ಪತ್ತಿನ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕರೊನಾದಿಂದ ನಿರೀಕ್ಷೆಯಂತೆ ಕೆಲಸ ಮಾಡಲಾಗುತ್ತಿಲ್ಲ. ಆದರೂ ಅನಿವಾರ್ಯವಾಗಿ ಇದರೊಂದಿಗೆ ಹೊಂದಿಕೊಂಡು ಜೀವನ ಸಾಗಿಸಬೇಕಿದೆ ಎಂದರು.
ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಎಂ.ಎಸ್.ನಿರಂಜನ್ ಮಾತನಾಡಿ, ಈ ಹಿಂದೆ ಜಿಪಂ ಸದಸ್ಯನಾಗಿ ಕಾರ್ಯ ನಿರ್ವಹಿಸಿದ ಅನುಭವ ಹಾಗೂ ಸ್ಥಳೀಯವಾಗಿ ಸಹಕಾರ ಸಂಸ್ಥೆಯಲ್ಲಿ ದುಡಿಯುವ ಮೂಲಕ ಇಲ್ಲಿನ ಷೇರುದಾರರು ಹಾಗೂ ರೈತರ ಸಮಸ್ಯೆ ಅರಿವು ಇರುವುದರಿಂದ ಅವರ ನಂಬಿಕೆಯಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.
ಜನಸ್ನೇಹಿ ಆಡಳಿತಕ್ಕೆ ಒತ್ತು: ನಗರಸಭೆ ವ್ಯಾಪ್ತಿಯಲ್ಲಿ ಜನರ ನಿರೀಕ್ಷೆಯಂತೆ ಕೆಲಸ ನಿರ್ವಹಿಸುತ್ತಿದ್ದು, ಅದರಲ್ಲೂ ಕರೊನಾ ಸಂದರ್ಭ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆ ಹಾಗೂ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪೌರ ಕಾರ್ವಿುಕರು ಹಾಗೂ ಸಿಬ್ಬಂದಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಪೌರಾಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು. ನಗರಸಭೆಯಲ್ಲಿ ಇತ್ತೀಚೆಗೆ ದಲ್ಲಾಳಿಗಳ ಹಾವಳಿ ನಿಯಂತ್ರಿಸಿ ಜನರು ಅಲೆದಾಡುವುದನ್ನು ತಪ್ಪಿಸಿ ಬಹಳಷ್ಟು ಕಡತಗಳಿಗೆ ಮುಕ್ತಿ ಕೊಡಲಾಗಿದೆ ಎಂದು ಹೇಳಿದರು. ಇ-ಸ್ವತ್ತು ಮತ್ತಿತರ ಕೆಲಸಗಳಿಗೆ ಜನರು ಪರದಾಡಬಾರದು ಎಂದು ಆಡಳಿತಕ್ಕೆ ಚುರುಕು ಮುಟ್ಟಿಸಲಾಗಿದೆ ಎಂದರು.