

ನುಗ್ಗೇಹಳ್ಳಿ : ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ದುರಸ್ತಿ, ನೂತನ ಶವಾಗಾರ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹೋಬಳಿ ಕೇಂದ್ರದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಲೆಂದು ನನ್ನ ಹಿಂದಿನ ಅವಧಿಯಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ಮಾಡಲಾಗಿದೆ. ಇದರಿಂದ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿದೆ. ಇದರ ಜತೆಗೆ ಆರೋಗ್ಯ ಸಚಿವರಿಗೆ ತಾಲೂಕಿನ ವಿವಿಧ ಆಸ್ಪತ್ರೆಗಳ ನವೀಕರಣಕ್ಕೆ ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ತಮ್ಮ ಮನವಿಗೆ ಸ್ಪಂದಿಸಿರುವ ಸರ್ಕಾರ ಹೋಬಳಿ ಕೇಂದ್ರದ ಸಮುದಾಯ ಆರೋಗ್ಯದ ಹಳೆಯ ಕಟ್ಟಡ ಹಾಗೂ ಶವಾಗಾರ ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ಮಧುಮೇಹ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವದರಿಂದ ಎಬಿಆರ್‌ಕೆ ಅನುದಾನವನ್ನು ಬಳಸಿ ಪರೀಕ್ಷಾ ಯಂತ್ರವನ್ನು ಸದ್ಯದಲ್ಲೇ ಖರೀದಿಸುವಂತೆ ಆಸ್ಪತ್ರೆಯ ಆಡಳಿತ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದರಿಂದ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಸದ್ಯ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ ಖಾಲಿ ಇದ್ದು ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ ಖಾಲಿ ಹುದ್ದೆ ತುಂಬಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ನುಗ್ಗೇಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಭರತ್ ರೆಡ್ಡಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡು ರಕ್ತದಾನ ಮಾಡಿದರು. ಶಿಬಿರದಲ್ಲಿ ಸುಮಾರು 140 ಜನ ಕಣ್ಣಿನ ಪರೀಕ್ಷೆಗೆ ಒಳಗಾದರು. 314 ಜನ ವಿವಿಧ ಕಾಯಿಲೆಗಳ ತಪಾಸಣೆ ಮಾಡಿಸಿದರು. 38 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ. ವಿಠಲ್ ಕುಮಾರ್, ಮೈಸೂರು ನಾರಾಯಣ ನೇತ್ರಾಲಯ ಕ್ಯಾನ್ಸರ್ ತಜ್ಞ ಡಾ. ಗುಲ್ಜಾರ್, ಡಾ.ಹರ್ಷಿತ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸುಹಾಸ್, ಡಾ. ರಮ್ಯಾ, ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ಎಚ್.ಜಿ.ಭರತ್ ಕುಮಾರ್, ಸಂಸ್ಥೆ ಕಾರ್ಯದರ್ಶಿ ಜಬಿವುಲ್ಲಾ, ನಿರ್ದೇಶಕ ಉದಯಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಾಮಣಿ ಹರೀಶ್, ಕೃಷಿ ಪತ್ತಿನ ನಿರ್ದೇಶಕ ತೋಟಿ ನಾಗರಾಜ್, ಗ್ರಾಪಂ ಸದಸ್ಯರಾದ ಎನ್. ಆರ್. ಶಿವಕುಮಾರ್ ಹಾಜರಿದ್ದರು.