ಹಣ ಬಿಡುಗಡೆಗೆ ಅಧಿವೇಶನದಲ್ಲಿ ಪ್ರತಿಭಟನೆ - ಶಾಸಕ ಎಸ್.ಭೀಮಾನಾಯ್ಕ

Rampura Road Construction work
ಕೊಟ್ಟೂರು ತಾಲೂಕು ರಾಂಪುರ ಗ್ರಾಮದಲ್ಲಿ ಮೂರ್ತಿನಾಯಕನಹಳ್ಳಿ-ಬೋರನಹಳ್ಳಿ ಕ್ರಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಭೀಮಾನಾಯ್ಕ ಸೋಮವಾರ ಚಾಲನೆ ನೀಡಿದರು.
Published on

ಕೊಟ್ಟೂರು: ಹಗರಿಬೊಮ್ಮನಹಳ್ಳಿ ಕ್ಷೇತ್ರದ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ 370 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

ತಾಲೂಕಿನ ರಾಂಪುರದಲ್ಲಿ ಸೋಮವಾರ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಮೂರ್ತಿನಾಯನಹಳ್ಳಿಯಿಂದ ಬೋರನಹಳ್ಳಿ ಕ್ರಾಸ್‌ವರೆಗೆ 5.35 ಕೋಟಿ ರೂ.ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸದನದಲ್ಲಿ ಒಪ್ಪಿಗೆ ನೀಡದಿದ್ದರೆ ಕ್ಷೇತ್ರದ ರೈತರೊಂದಿಗೆ ಬೆಂಗಳೂರಿಗೆ ತೆರಳಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು. ನಾನು ಜೆಡಿಎಸ್ ಶಾಸಕನಾಗಿದ್ದಾಗ, ಆಗಿನ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಹಿತದೃಷ್ಟಿಯಿಂದ ನೂರಾರು ಕೋಟಿ ರೂ. ಬಿಡುಗಡೆ ಮಾಡಿದ್ದರು. ಇದನ್ನು ಯಡಿಯೂರಪ್ಪ ರೂಢಿಸಿಕೊಳ್ಳಬೇಕು ಎಂದರು.

ಕ್ಷೇತ್ರದಲ್ಲಿ 20 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಡಿ ಕೊಟ್ಟೂರು ಪಟ್ಟಣದ ಅಭಿವೃದ್ಧಿಗೆ 5 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಜಿ.ಅನಿಲ್ ಕುಮಾರ್, ತಾಪಂ ಇಒ ಎಚ್.ತಿಮ್ಮಣ್ಣ, ಎಡಿ ಕೆಂಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net