ಕಾಂಗ್ರೆಸ್​ನಿಂದ ಅನುದಾನ ರಾಜಕಾರಣ

JS
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ರಾಜಕಾರಣ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 9 ತಿಂಗಳಾಗಿದೆ. ಕೇಂದ್ರದಿಂದ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಕಳೆದ 2 ತಿಂಗಳಿಂದ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ದೆಹಲಿಗೆ ತೆರಳಿ ಹೋರಾಟ ಮಾಡಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಧ್ವನಿ ಎತ್ತಲಿಲ್ಲ ಏಕೆ? ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

ಅಂದು ಗುಜರಾತ್​ಗೆ ಅನ್ಯಾಯವಾಗಿದ್ದನ್ನು ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ ಧ್ವನಿ ಎತ್ತುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಇಬ್ಭಾಗವಾಗುತ್ತಿದೆ. ಅಲ್ಲಿಯವರೇ ಬಿಜೆಪಿಗೆ ಬರುತ್ತಿದ್ದಾರೆ. ಅಶೋಕ ಚವ್ಹಾಣ ಬಂದಿದ್ದಾರೆ. ಕಮಲನಾಥ್ ಬಿಜೆಪಿ ಬಾಗಿಲು ತಟ್ಟಿ ಹೋಗಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಬಿಜೆಪಿ ಚುನಾವಣೆ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಮುಂಚಿತವಾಗಿಯೇ ತಿಳಿಸಿದ್ದೆ. ಈ ವಾರದಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net