ಡೋಣಿ ಹೂಳೆತ್ತಲು ಮಂಜೂರಾತಿ ನೀಡಿ; ಅಧಿಕಾರಿಗಳಿಗೆ ಸಂಸದ ರಮೇಶ ಜಿಗಜಿಣಗಿ ಸೂಚನೆ

DONI RIVER MP JIGAJINAGI
ವಿಜಯಪುರ ಜಿಲ್ಲಾಡಳಿತ ಕಚೇರಿಗೆ ರೈತರ ನಿಯೋಗದೊಂದಿಗೆ ಆಗಮಿಸಿದ ಸಂಸದ ರಮೇಶ ಜಿಗಜಿಣಗಿ. ಉಮೇಶ ಕೋಳಕೂರ, ಸಂಜಯಗೌಡ ಬಿ. ಪಾಟೀಲ, ವಿವೇಕಾನಂದ ಡಬ್ಬಿ ಮತ್ತಿತರರಿದ್ದಾರೆ.
Published on

ವಿಜಯಪುರ: ಡೋಣಿ ನದಿ ಹೂಳೆತ್ತುವ ಕಾಮಗಾರಿಗೆ ಮಂಜೂರಾತಿ ನೀಡುವುದು ಹಾಗೂ ಮಳೆಯಿಂದ ಸಂಭವಿಸಿದ ಬೆಳೆ ಹಾನಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವಂತೆ ಸಂಸದ ರಮೇಶ ಜಿಗಜಿಣಗಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಬಬಲೇಶ್ವರ, ತಿಕೋಟಾ ಮತ್ತಿತರ ಭಾಗಗಳಿಂದ ಬಂದ ರೈತರ ನಿಯೋಗದೊಂದಿಗೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ರೈತರು ಸಾಕಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಡೋಣಿ ನದಿಯಿಂದ ಬೆಳೆ ಹಾನಿಯಾದರೆ ಇನ್ನೊಂದೆಡೆ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದೆ. ಹೀಗಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಸೂಚಿಸಿದರು.

ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ ಹಾಗೂ ಕೃಷಿ ಬೆಳೆಗಳಾದ ತೊಗರಿ, ಕಡಲೆ, ಗೋವಿನ ಜೋಳ ಮುಂತಾದ ಬೆಳೆಗಳು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಪರಿಹಾರ ಕಲ್ಪಿಸದೇ ಹೋದರೆ ರೈತರ ಬದುಕು ಬೀದಿಗೆ ಬೀಳಲಿದೆ ಎಂದರು.

ಜಿಲ್ಲೆಯ ಇಬ್ಬರು ಸಚಿವರು ಡೋಣಿ ನದಿ ಹೂಳೆತ್ತಲು ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಿದರೆ ಕೇಂದ್ರ ಸರ್ಕಾರದಿಂದ ಸಾಧ್ಯವಾದಷ್ಟು ಅನುದಾನ ಒದಗಿಸಲು ನಾನು ಶ್ರಮಿಸುವೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಮುಖಂಡರಾದ ಸಂಜಯಗೌಡ ಬಿ. ಪಾಟೀಲ, ವಿವೇಕಾನಂದ ಡಬ್ಬಿ, ಈರಣ್ಣ ರಾವೂರ, ಮಲ್ಲು ಕನ್ನೂರ, ಈರಣ್ಣ ಶಿರಮಗೊಂಡ, ಗುರಣ್ಣ ಜಂಗಮಶೆಟ್ಟಿ, ಗುರಣ್ಣ ಬೂದಿಹಾಳ, ಕಲ್ಮೇಶ ಹಿರೇಮಠ, ರಮೇಶ ಜುಮನಾಳ, ಆನಂದ ಸೋಮಕ್ಕನವರ, ಸಿದ್ದುಗೌಡ ಬಿರಾದಾರ, ವಿಠ್ಠಲ ರಾಮತೀರ್ಥ, ಎಂ.ಟಿ. ಪಾಟೀಲ, ಶ್ರೀಶೈಲ ಕೊಟ್ಯಾಳ, ಸಂಗಪ್ಪ ಕೊಟ್ಯಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net