ದೇವಸ್ಥಾನಗಳಿಗೆ 2.23 ಕೋಟಿ ರೂ. ಅನುದಾನ ಬಾಕಿ

temple
Published on

ಗೋಪಾಲಕೃಷ್ಣ ಪಾದೂರು, ಉಡುಪಿ

ಬಿಜೆಪಿ ಸರ್ಕಾರ 2022-23ನೇ ಸಾಲಿನಲ್ಲಿ ಚುನಾವಣಾ ವರ್ಷದಲ್ಲಿ ಮಠ, ಮಂದಿರಗಳಿಗೆ ಭರಪೂರ ಅನುದಾನ ನೀಡಿದ್ದು, ಜಿಲ್ಲೆಯ 115ಕ್ಕೂ ಅಧಿಕ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಸುಮಾರು 18.95 ಕೋಟಿ ರೂ. ಮಂಜೂರುಗೊಳಿಸಿತ್ತು. ಇದರಲ್ಲಿ 16.72 ಕೋಟಿ ರೂ. ಬಿಡುಗಡೆಯಾಗಿದೆ. 2 ವರ್ಷದ ಬಳಿಕವೂ ಉಳಿದ ಮೊತ್ತ 2.23 ಕೋಟಿ ರೂ. ದೇವಸ್ಥಾನಗಳ ಖಾತೆಗೆ ಜಮೆಯಾಗಿಲ್ಲ.

ವಿಶೇಷವೆಂದರೆ 115 ಧಾರ್ಮಿಕ ಕೇಂದ್ರಗಳ ಪೈಕಿ ಕೇವಲ 24 ದೇವಸ್ಥಾನಗಳಿಗೆ ಘೋಷಿಸಲ್ಪಟ್ಟ ಅನುದಾನದಲ್ಲಿ ಪೂರ್ಣಮೊತ್ತ ಸಂದಾಯವಾಗಿದೆ. ಉಳಿದ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಅರ್ಧ ಮೊತ್ತ ಮಾತ್ರ ಬಿಡುಗಡೆಯಾಗಿದೆ. ಮಾಜಿ ಶಾಸಕ ರುಪತಿ ಭಟ್​ ಆಡಳಿತ ಮೊಕ್ತೇಸರರಾಗಿರುವ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ 25 ಲಕ್ಷ ರೂ. ಮಂಜೂರಾಗಿದ್ದು, 12.50 ಲಕ್ಷ ರೂ. ಜಮೆಯಾಗಿದೆ. ಅದೇ ರೀತಿ ಪಲಿಮಾರು ಮಠದ ಶ್ರೀರಾಮಾಂಜನೇಯ ಪ್ರತಿಷ್ಠಾನಕ್ಕೆ 3 ಕೋಟಿ ರೂ. ಮೊತ್ತದಲ್ಲಿ 1.50 ಕೋಟಿ ರೂ., ನರಸಿಂಹಸ್ವಾಮಿ ಮಠಕ್ಕೆ 1 ಕೋಟಿ ರೂ. ಮೊತ್ತದಲ್ಲಿ 50 ಲಕ್ಷ ರೂ., ಸಗ್ರಿ ದೇವಸ್ಥಾನಕ್ಕೆ 50 ಲಕ್ಷ ಮೊತ್ತದಲ್ಲಿ 25 ಲಕ್ಷ ರೂ., ವಾದಿರಾಜ ಸಂಶೋಧನ ಪ್ರತಿಷ್ಠಾನಕ್ಕೆ 60 ಲಕ್ಷದಲ್ಲಿ 30 ಲಕ್ಷ ರೂ., ಕಾರ್ಕಳ ಮಾರಿಯಮ್ಮ ದೇವಸ್ಥಾನಕ್ಕೆ 1 ಕೋಟಿ ರೂ. ಮೊತ್ತದಲ್ಲಿ 25 ಲಕ್ಷ ರೂ. ಖಾತೆಗೆ ಜಮೆಯಾಗಿದೆ. ಉಳಿದ ಹಣ ಬಿಡುಗಡೆಗೊಳಿಸಲು ಅನೇಕ ಬಾರಿ ಮನವಿ ಮಾಡಿದರೂ ಧಾರ್ಮಿಕ ದತ್ತಿ ಇಲಾಖೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಎಂಬುದಾಗಿ ವಿವಿಧ ದೇವಸ್ಥಾನಗಳ ಆಡಳಿತ ಸಮಿತಿ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.

2 ವರ್ಷದಲ್ಲಿ ಸಿಕ್ಕಿದ್ದು 2.96 ಕೋಟಿ ರೂ.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2023&24ನೇ ಸಾಲಿನಲ್ಲಿ ಸರ್ಕಾರದಿಂದ ಸಾಮಾನ್ಯ ಯೋಜನೆಯಡಿಯಲ್ಲಿ 23 ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ 1.56 ಕೋಟಿ ರೂ. ಮತ್ತು 2024-25ನೇ ಸಾಲಿನಲ್ಲಿ 21 ಧಾರ್ಮಿಕ ಸಂಸ್ಥೆಗಳಿಗೆ 1.40 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.

ಆರಾಧನಾ, ಟಿಎಸ್ಪಿ, ಎಸ್​ಸಿಪಿ ಅನುದಾನ

ಬಿಜೆಪಿ ಸರ್ಕಾರ 2022-23ನೇ ಸಾಲಿನಲ್ಲಿ ಜಿಲ್ಲೆಯ 15 ದೈವಸ್ಥಾನಗಳಿಗೆ 11,16,000 ರೂ. ಅನುದಾನ ನೀಡಿದ್ದು, ಕಾಂಗ್ರೆಸ್​ ಸರ್ಕಾರವೂ ವಿವಿಧ ದೈವಸ್ಥಾನ, ಭಜನಾ ಮಂದಿರಗಳ ಅಭಿವೃದ್ಧಿಗೆ ಅಷ್ಟೇ ಮೊತ್ತದ ಅನುದಾನ ಮಂಜೂರುಗೊಳಿಸಿದೆ. 2022-23ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಲ್ಲಿ 2,67,800 ರೂ. ಬಿಡುಗಡೆಯಾಗಿದ್ದು, 2023-24ನೇ ಸಾಲಿನಲ್ಲಿ ಮತ್ತು 2024&25ನೇ ಸಾಲಿನಲ್ಲಿ ಯಥಾಸ್ಥಿತಿ ಅನುದಾನ ಮಂಜೂರಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಮೂರು ಅವಧಿಯಲ್ಲಿಯೂ 11,16,000 ರೂ. ಅನುದಾನ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net