ಅಭಿವೃದ್ಧಿ ಕಾಮಗಾರಿಗೆ 15 ದಿನಗಳಲ್ಲಿ ಅನುದಾನ

DESPANDE
Published on

ಶಿರಸಿ: ಬಿಜೆಪಿ ಆಡಳಿತದ ಅವಧಿಯಲ್ಲೇ ಕೆಲ ರೈತರ ಜಮೀನು ವಕ್ಫ್ ಹೆಸರಿಗೆ ಬದಲಾಗಿದೆ. ಈಗ ಉಪಚುನಾವಣೆಗಾಗಿ ಬಿಜೆಪಿಗರು ವಕ್ಫ್ ವಿಷಯದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50-60 ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದ ಜಮೀನು ನಿಜವಾದ ರೈತರಿಗೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಮುಡಾ ಹಾಗೂ ವಾಲ್ಮೀಕಿ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಈಗಾಗಲೇ ಸಿಎಂ ಹಾಗೂ ಅವರ ಪತ್ನಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ವಾಲ್ಮೀಕಿ ಪ್ರಕರಣದ ತನಿಖೆಯೂ ಪ್ರಗತಿಯಲ್ಲಿದೆ ಎಂದರು.

ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿರುವ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಗ್ಯಾರಂಟಿಗೆ 67 ಸಾವಿರ ಕೋಟಿ ರೂ. ಬೇಕಾಗುತ್ತದೆ. ಹೀಗಾಗಿ ಅಭಿವೃದ್ಧಿ ಕಾಮಗಾರಿಗೆ ಸಂಪನ್ಮೂಲ ಕ್ರೋಡೀಕರಿಸಲಾಗುತ್ತಿದೆ. ಇನ್ನೂ 15 ದಿನಗಳಲ್ಲಿ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.

ಮಳೆಗಾಲದಲ್ಲಿ ಬೆಳೆ ಹಾನಿಯಾದ ಬಗ್ಗೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಶಾಸಕ ಭೀಮಣ್ಣ ನಾಯ್ಕ ಇದ್ದರು.

ಶಿರಸಿ ಪ್ರತ್ಯೇಕ ಜಿಲ್ಲೆ ನಿರ್ಮಾಣಕ್ಕೆ ನನ್ನ ಬೆಂಬಲವಿದೆ. ಜನರಿಗೆ, ಆಡಳಿತಕ್ಕೆ ಅನುಕೂಲ ಆಗುವುದಾದರೆ ನಿಶ್ಚಿತವಾಗಿ ಆಗಲಿ. ಈ ಬಗ್ಗೆ ಜನಾಭಿಪ್ರಾಯ ಮೂಡಬೇಕು. ಆಡಳಿತಾತ್ಮಕವಾಗಿ ಜನರಿಗೆ ಅನುಕೂಲವಾಗುವಂಥ ಜಾಗದಲ್ಲಿ ಜಿಲ್ಲೆಯಾಗಬೇಕು. - ಆರ್.ವಿ. ದೇಶಪಾಂಡೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net