ಅರಣ್ಯ ಭೂಮಿ ಹಕ್ಕು ಕೊಡಿ

Dr. Ys Gurushant Talking in Meeting
Published on

ಅಂಕೋಲಾ: ಆದಿವಾಸಿ ಬುಡಕಟ್ಟು ಕುಟುಂಬಗಳಿಗೆ ಸರ್ಕಾರ ಕೂಡಲೇ ಅಗತ್ಯ ಕ್ರಮ ತೆಗೆದುಕೊಂಡು ಅರಣ್ಯ ಭೂಮಿ ಹಕ್ಕು ನೀಡಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಎಸ್.ವೈ. ಗುರುಶಾಂತ ಹೇಳಿದರು.

ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಆದಿವಾಸಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ 14 ರಿಂದ 15 ಕೋಟಿ ಆದಿವಾಸಿಗಳಿದ್ದಾರೆ. ಅರಣ್ಯ ಭೂಮಿ ಹಕ್ಕು ಪತ್ರಕ್ಕೆ ಹಾಕಿದ 2.26 ಲಕ್ಷ ಅರ್ಜಿಗಳಲ್ಲಿ ಹನ್ನೆರಡು ಸಾವಿರ ಅರ್ಜಿಗಳನ್ನು ಮಾತ್ರ ಪರಿಗಣಿಸಿ ತೀವ್ರ ಅನ್ಯಾಯ ಮಾಡಲಾಗಿದೆ, ಆದರೆ, 2.28 ಲಕ್ಷ ಭೂಮಿಯನ್ನು ಅಂಬಾನಿ-ಅದಾನಿಗಳಿಗೆ ಈ ಅವಧಿಯಲ್ಲಿ ನೀಡಲಾಗಿದೆ. ಈ ತಾರತಮ್ಯದ ವಿರುದ್ಧ ಸಂಘಟಿತ ಹೋರಾಟ ಒಂದೇ ದಾರಿ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾದ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಈ ದೇಶ ನಮ್ಮದು, ಈ ನೆಲ ನಮ್ಮದು, ನಮ್ಮನ್ನು ಒಕ್ಕಲೆಬ್ಬಿಸಲು ಇವರ್ಯಾರು ಎಂದು ಪ್ರಶ್ನಿಸಿದರು. ರಾಜ್ಯ ಅರಣ್ಯ ಸಚಿವರು ಪದೇಪದೆ ಒಕ್ಕಲೆಬ್ಬಿಸುತ್ತೇವೆ ಎಂದು ಹೇಳುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಲಕ್ಷ್ಮೀ ಸಿದ್ದಿ ನಿರ್ಣಯ ಮಂಡಿಸಿದರು. ಸಿಐಟಿಯು ಮುಖಂಡರಾದ ಯಮುನಾ ಗಾಂವ್ಕರ್, ತಿಲಕ್ ಗೌಡ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡರಾದ ಭೀಮಣ್ಣ ಬೋವಿ, ಎಚ್.ಬಿ. ನಾಯಕ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಪ್ರೇಮಾನಂದ ವೇಳಿಪ್ ಮಾತನಾಡಿ, ತಮ್ಮ ಬೇಡಿಕೆಗಳಿಗಾಗಿ ಎಲ್ಲಾ ಆದಿವಾಸಿ ಪಂಗಡಗಳು ಒಂದಾಗಬೇಕು. ಕುಣಬಿ, ಹಾಲಕ್ಕಿ, ಕುಂಬ್ರಿ ಮರಾಠಿ, ಗೌಳಿ ಮುಂತಾದ ಬುಡಕಟ್ಟುಗಳನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ರಾಜೇಶ ಗಾವುಡಾ ವರದಿ ವಾಚಿಸಿದರು, ತಿಮ್ಮಪ್ಪ ಗೌಡ ಕಾರ್ಯಕ್ರಮ ನಿರ್ವಹಿಸಿದರು.

ಸಮಿತಿ ಮರು ರಚನೆ

ಜಿಲ್ಲಾ ಸಂಚಾಲಕರಾಗಿ ಪ್ರೇಮಾನಂದ ವೇಳಿಪ್, ಸಹ ಸಂಚಾಲಕರಾಗಿ ಲಕ್ಷ್ಮೀ ಸಿದ್ದಿ, ಶಾಂತಾರಾಮ ನಾಯಕ, ರಾಜೇಶ ಗಾವುಡಾ, ವೆಂಕಟರಮಣ ಗೌಡಾ, ಸಮಿತಿ ಸದಸ್ಯರಾಗಿ ನಾಗೇಶ ಗೌಡ, ಜನಾರ್ದನ ಮರಾಠಿ, ಗೀತಾ ಗೌಡ, ಜೋನ್ ಬಿಳ್ಕಿಕರ್, ಶಂಕರ್ ಗೌಡ, ಅಗಸ್ಟೀನ್ ಸಿದ್ದಿ, ಶಾಂತಾ ವೇಳಿಪ್, ಮಾಸ್ತಿ ಗೌಡ, ಸೋಮು ಗೌಡ ಹಾಗೂ ಬಾಗಿ ಎನ್. ಸಿದ್ದಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net