

ತುಮಕೂರು: ಅಂಗವಿಕಲರ ಶ್ರೇಯೋಭಿವೃದ್ಧಿಗೆ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಪ್ರತೀ ವರ್ಷ 160 ಕೋಟಿ ರೂ. ಅನುದಾನ ಮೀಸಲಿಡಲಾಗಿರುತ್ತದೆ ಎಂದು ಅಂಗವಿಕಲ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಹೇಳಿದರು.
ನಗರದ ಬಾಲಭವನದಲ್ಲಿ ಬುಧವಾರ ಆಯೋಜಿಸಿದ್ದ ಅಂಗವಿಕಲರ ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ಸಕ್ಷಮ ಜಿಲ್ಲಾ ಘಟಕದ ದ್ವಿತೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಗೆ ಪ್ರತೀ ವರ್ಷ 10 ಸಾವಿರ ಕೋಟಿ ರೂ., ಅನುದಾನ ಬಿಡುಗಡೆಯಾಗಲಿದ್ದು, ಶೇ.5 ಅಂಗವಿಕಲರಿಗೆ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ, ಅಂಗವಿಕಲರು ಆರೋಗ್ಯ ಇಲಾಖೆಯ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪ್ರತ್ಯೇಕ ನ್ಯಾಯಾಲಯ: ಅಂಗವಿಕಲರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 32 ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಈ ನ್ಯಾಯಾಲಯಗಳಲ್ಲಿ ತಿಂಗಳಿಗೆ 2 ಅಥವಾ 3 ದಿನ ಪ್ರತ್ಯೇಕವಾಗಿ ಪ್ರಕರಣಗಳನ್ನು ತೆಗೆದುಕೊಂಡು ನ್ಯಾಯ ಒದಗಿಸುವ ವ್ಯವಸ್ಥೆ ರಾಜ್ಯದಲ್ಲಿ ಜಾರಿ ಇದೆ ಎಂದು ತಿಳಿಸಿದರು.
ಪ್ರಸ್ತುತ ವರ್ಷದಲ್ಲಿ ಆರೋಗ್ಯ ಇಲಾಖೆಗೆ 28 ಕೋಟಿ ರೂ., ಅನುದಾನ ಮೀಸಲಿಡಲಾಗಿದೆ. ಈ ಅನುದಾನದಲ್ಲಿ ಅಂಗವಿಕಲರ 6 ಸಾವಿರ ಮಕ್ಕಳಿಗೆ ಸರ್ಜರಿ ಮಾಡುವ ಅವಕಾಶವಿದೆ. ಅದರ ಜತೆಗೆ ವಿವಿಧ ಸಲಕರಣೆಗಳನ್ನು ನೀಡುವ ವ್ಯವಸ್ಥೆ ಆರೋಗ್ಯ ಇಲಾಖೆಯಲ್ಲಿ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿಯಲ್ಲಿ ಶೇ.3 ರಿಂದ 5 ಅನುದಾನ ಅಂಗವಿಕಲರಿಗೆ ಮೀಸಲಿದ್ದು ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂ ಮತ್ತಿತರೆ ಸಂಘ ಸಂಸ್ಥೆಗಳು ಕ್ರಿಯಾಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದು ಜಿಪಂ ಸಿಇಒ ಶುಭ ಕಲ್ಯಾಣ್ ಹೇಳಿದರು. ಎಲ್ಲ ಕಚೇರಿಗಳಲ್ಲಿ ಅಂಗವಿಕಲರಿಗಾಗಿ ರ‌್ಯಾಂಪ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶೀಘ್ರ ಜಿಪಂನಲ್ಲಿ ಲಿಫ್ಟ್ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಕ್ಷಮ ಅಖಿಲ ಭಾರತೀಯ ಕಾರ್ಯದರ್ಶಿ ಕಮಲಾ ಕಾಂತ್ ಪಾಂಡೆ, ಸಕ್ಷಮ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಯರಾಂ ಬೊಳ್ಳಾಜೆ, ಪದ್ಮನಾಭ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಎಂ.ರಮೇಶ್, ರಮೇಶ್ ಪ್ರಭು, ಅಂಗವಿಕಲರ ಹಕ್ಕುಗಳ ಕಾಯ್ದೆ ಮಾಜಿ ರಾಜ್ಯ ಆಯುಕ್ತ ಕೆ.ವಿ.ರಾಜಣ್ಣ, ಪಾವಗಡ ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್, ಗಾಯತ್ರಿ
ರವೀಶ್, ಹನುಮಂತರಾಯ, ಟಿ.ಎಸ್.ಮಂಜುಳಾ ಉಪಸ್ಥಿತರಿದ್ದರು.
ಏಕತಾ ನಡಿಗೆ: ನಗರದ ಟೌನ್‌ಹಾಲ್ ವೃತ್ತದಿಂದ ಬಾಲಭವನದವರೆಗೆ ಏಕತಾ ನಡಿಗೆ ಜಾಥಾ ನಡೆಯಿತು. ಈ ಜಾಥಾದಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಡಾ.ಡಿ.ಎನ್.ರವಿಕುಮಾರ್, ಡಾ. ದಿನೇಶ್‌ಕುಮಾರ್, ಡಾ. ಎಸ್.ಮಂಜುನಾಥ್, ಸಾಗರನಹಳ್ಳಿ ವಿಜಯ್‌ಕುಮಾರ್, ಎಚ್.ಎಂ.ರವೀಶಯ್ಯ, ತರಕಾರಿ ಮಹೇಶ್ ಇದ್ದರು.
ಅಂಗವಿಕಲರ ಹಕ್ಕುಗಳ ಕಾಯ್ದೆ-2016 ಪ್ರಕಾರ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳ ಅನುದಾನದಲ್ಲಿ ಶೇ 5 ಅಂಗವಿಕಲರಿಗೆ ವಿನಿಯೋಗಿಸಬೇಕು. 33 ಇಲಾಖೆಗಳು, ಸ್ಥಳೀಯ ಸಂಸ್ಥೆಗಳಿಂದ ಪ್ರತಿವರ್ಷ ಜಿಲ್ಲೆಗೆ ಸುಮಾರು 10 ಕೋಟಿ ರೂ., ಸಿಗಲಿದ್ದು ಈ ಅನುದಾನವನ್ನು ಸಮರ್ಪಕವಾಗಿ ಬಳಸಿ 5-6 ವರ್ಷಗಳಲ್ಲಿ ಜಿಲ್ಲೆಯ ಅಂಗವಿಕಲರಿಗೆ ಅಗತ್ಯ ಸವಲತ್ತು ಕಲ್ಪಿಸಲು ಸಾಧ್ಯವಿದೆ. ವಿ.ಎಸ್.ಬಸವರಾಜು ಅಂಗವಿಕಲರ ಹಕ್ಕುಗಳ ಕಾಯ್ದೆ ರಾಜ್ಯ ಆಯುಕ್ತ