ಶಾಲಾ ಕೊಠಡಿ ದುರಸ್ತಿಗೆ ಅನುದಾನ

10 GJD
Published on

ಗಜೇಂದ್ರಗಡ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಹಾಗೂ ಒಂದೂವರೆ ಶತಮಾನದ ಇತಿಹಾಸವಿರುವ ಪಟ್ಟಣದ ಬಾಲಕಿಯರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಕೊನೆಗೂ ದುರಸ್ತಿ ಭಾಗ್ಯ ಒದಗಿ ಬಂದಿದೆ. ಇಲ್ಲಿ 1ರಿಂದ 7ನೇ ತರಗತಿಯ ವರೆಗೆ ಒಟ್ಟು 502 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಸಿಗದೆ ವಂಚಿತರಾಗಿದ್ದಾರೆ. ಕೊಠಡಿಗಳು ಸಂಪೂರ್ಣ ಶಿಥಿಲಗೊಂಡ ಬಗ್ಗೆ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಶಾಲೆಗೆ ಭೇಟಿ ನೀಡಿ ಶಾಲೆಯ 3 ಕೊಠಡಿಗಳ ದುರಸ್ತಿಗೆ 4.5 ಲಕ್ಷ ರೂ.ಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶಾಸಕರ ನಿಧಿಯಲ್ಲಿ ತಾಲೂಕಿನ ಎಲ್ಲ ಶಾಲೆಗಳ ದುರಸ್ತಿಗಾಗಿ 3 ಕೋಟಿ ರೂ ಅನುದಾನ ನೀಡಲಾಗಿದ್ದು, ಅದರಲ್ಲಿ ಈ ಶಾಲೆಗೆ 4.5 ಲಕ್ಷ ರೂ. ನೀಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಸಹ ಅಭಯ ನೀಡಿದ್ದಾರೆ. ಅಷ್ಟೇ ಅಲ್ಲದೆ ಶತಮಾನಗಳ ಕಂಡ ಶಾಲೆಗಳ ಅಭಿವೃದ್ಧಿಗೆ ದೊರೆಯುತ್ತಿರುವ ವಿಶೇಷ ಅನುದಾನವೂ ದೊರೆಯಲಿದ್ದು, ಆ ಹಣವನ್ನೂ ಕೊಠಡಿಗಳ ದುರಸ್ತಿಗೆ ಬಳಸಲಾಗುವುದು ಎಂದು ಮಾಹಿತಿ ನೀಡಿದರು. ಈ ಕುರಿತು ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಜ.6ರಂದು ‘ಶತಮಾನದ ಶಾಲೆ ಕೊಠಡಿ ಶಿಥಿಲ’ ಶಿರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ರೋಣ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 4.5 ಲಕ್ಷ ರೂ. ಗಜೇಂದ್ರಗಡ ಬಾಲಕಿಯರ ಶಾಲೆಗೆ ದೊರೆಯಲಿದೆ. ಶಾಲೆಗೆ ಜಿಪಂ ಇಂಜಿನಿಯರ್ ಕಳಿಸಿ ಕಟ್ಟಡ ದುರಸ್ತಿಗಾಗಿ ಖರ್ಚುಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಭರತ್ ಎಸ್., ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net