

ಕಾರ್ಕಳ: ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುವ ಲೋಕೋಪಯೋಗಿ ಇಲಾಖೆ ಅಧೀನದ ರಾಜ್ಯ ಹೆದ್ದಾರಿಗಳನ್ನು ಹಾಗೂ ಜಿಲ್ಲಾ ಮುಖ್ಯ ಸಂಪರ್ಕ ರಸ್ತೆಗಳನ್ನು, ಸೇತುವೆಗಳನ್ನು ಅಭಿವೃದ್ಧಿಪಡಿಸಲು ಶಾಸಕ ವಿ.ಸುನೀಲ್ ಕುಮಾರ್‌ರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ 13 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.
ಮುದ್ರಾಡಿ - ಹೆಬ್ರಿ-ಬ್ರಹ್ಮಾವರ ರಾಜ್ಯ ಹೆದ್ದಾರಿ ಮುದ್ರಾಡಿ ಪೇಟೆಯಿಂದ ಜರುವತ್ತು ಸೇತುವೆ ತನಕ ರಸ್ತೆಯ ನವೀಕರಣಕ್ಕಾಗಿ 1.20ಕೋಟಿ ರೂ., ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ-37ರ ಚೆಂಡೆ ಬಸದಿ ಕ್ರಾಸ್-ಬಜಗೋಳಿವರೆಗೆ ರಸ್ತೆ ನವೀಕರಣಕ್ಕೆ 1.50 ಕೋಟಿ ರೂ., ಕಾಂಜರಕಟ್ಟೆ, ಇನ್ನಾ, ಸಾಂತೂರು ಕೊಪ್ಲ ಮುಂಡ್ಕೂ ಕಜೆ ಮಾರಿಗುಡಿ-ಸಚ್ಚರಿಪೇಟೆ ಜಿಲ್ಲಾಮುಖ್ಯ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ., ಬೆಳುವಾಯಿ ಕಾಂತಾವರ-ಮಂಜರಪಲ್ಕೆ ಜಿಲ್ಲಾ ಮುಖ್ಯ ರಸ್ತೆಯ ವಂಜಾರಕಟ್ಟೆಯಿಂದ ಬೋಪಾಡಿ ಸೇತುವೆ ತನಕ ರಸ್ತೆಯ ಅಭಿವೃದ್ಧಿಗೆ 1.80 ಕೋಟಿ ರೂ. ಬಿಡುಗಡೆಯಾಗಿದೆ. ಅಜೆಕಾರು-ಹೆರ್ಮುಂಡೆ-ಜಾರ್ಕಳ-ಕೆರ್ವಾಶೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ 2.50 ಕೋಟಿ ರೂ., ದುರ್ಗಾ ಮುಂಡ್ಲಿ-ಶಿರ್ಲಾಲು ಜಿಲ್ಲಾಮುಖ್ಯ ರಸ್ತೆ ಅಭಿವೃದ್ಧಿಗೆ 2.50 ಕೋಟಿ ರೂ. ನಿಗದಿಪಡಿಸಲಾಗಿದ್ದು, ಮುಡಾರು ರಾಜ್ಯಹೆದ್ದಾರಿ ರಾಮೇರುಗುತ್ತು ಬಳಿ ಶಿಥಿಲಗೊಂಡಿರುವ ಕಿರಿದಾದ ಹಳೆಯ ಸೇತುವೆ ಮರುನಿರ್ಮಾಣಕ್ಕೆ 1 ಕೋಟಿ ರೂ. ಹಾಗೂ ಹಾಗೂ ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ಜಿಲ್ಲಾಮುಖ್ಯ ರಸ್ತೆ, ಮಳೆಯಿಂದ ಹಾನಿಗೊಂಡಿರುವ ಬರಬೈಲಿನ ಕಿರಿದಾದ ಸೇತುವೆ ಮರು ನಿರ್ಮಿಸಲು 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.