ವಿಎಸ್‌ಕೆ ವಿವಿ ಅಭಿವೃದ್ಧಿಗೆ ಅನುದಾನ

Published on

ಬಳ್ಳಾರಿ : ಕಳೆದ ಕೆಲ ವರ್ಷಗಳಿಂದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಅನುದಾನವಿಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿತ್ತು. ಪ್ರಸ್ತಕ ಸಾಲಿನಲ್ಲಿ ಅಭಿವೃದ್ದಿಗಾಗಿ ಕೋಟ್ಯಾಂತರ ರೂ. ಅನುದಾನ ಬಿಡುಗಡೆಗೊಳಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ಅಡಿಯಲ್ಲಿ ಸ್ಥಾಪಿಸಲಾದ ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಶನ್ ಕಾರ್ಪೊರೇಷನ್ (ಕೆಎಂಇಆರ್‌ಸಿ) ಅನುದಾನದಡಿ ವಿವಿಯ ಉನ್ನತೀಕರಣಕ್ಕಾಗಿ 23.12 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು ವಿವಿಧ ಕಾಮಗಾರಿಗಳು ಕೆಲವೇ ದಿನಗಳಲ್ಲೇ ವೇಗ ಪಡೆಯಲಿದೆ.

ಏನೆಲ್ಲಾ ಅಭಿವೃದ್ಧಿ : ಈ ಕೆಎಂಆರ್‌ಸಿ ಅನುದಾನದಲ್ಲಿ ಆವರಣದಲ್ಲಿ ಸಮಾಜ ವಿಜ್ಞಾನ ವಿಭಾಗ, ಗಣಿತ ವಿಭಾಗ ಹಾಗೂ ಬಹು ಉಪಯುಕ್ತತೆಗಾಗಿ ನೂತನ ಕಟ್ಟಡಗಳನ್ನು ನಿರ್ಮಿಸುವುದು. ಅಲ್ಲದೆ, ಕಳೆದ ಕೆಲ ವರ್ಷಗಳಿಂದ ವಿವಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಮೂಲ ಸೌಕರ್ಯಗಳಿಲ್ಲದೆ ಸಂಕಷ್ಟ ಪಡುವಂತೆಯಾಗಿದೆ. ಆದ್ದರಿಂದ, ಈ ಅನುದಾನದಲ್ಲಿ ವಸತಿ ನಿಲಯಗಳಿಗೆ ಬೆಡ್‌ಗಳು, ಆಸನಗಳು, ಕೊಠಡಿಗಳಿಗೆ ಲೈಟಿಂಗ್ ಹಾಗೂ ಇತರೆ ಸೇರಿದಂತೆ ಸೌಲಭ್ಯಗಳು ಒದಗಿಸುವುದರ ಬಗ್ಗೆ ಚಿಂತನೆ ನಡೆಸಿದೆ. ಅಲ್ಲದೆ, ಪ್ರಮುಖವಾಗಿ ವಿವಿಯು ಆರಂಭವಾಗಿ ಹತ್ತು ವರ್ಷಕ್ಕೂ ಅಧಿಕ ಕಳೆದರೂ ಈವರೆಗೂ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಆದ್ದರಿಂದ, ಮಳೆ ಸುರಿದ ವೇಳೆ ನೀರು ಹೊರಗಡೆ ಹರಿಸಲು ಸಿಬ್ಬಂದಿ ಹರಸಾಹಸ ಪಡಬೇಕಿತ್ತು. ಇದರಲ್ಲಿ ಸುಸ್ಸಜ್ಜಿತವಾದ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ ವಿವಿಯನ್ನು ಸುಂದರೀಕರಣಗೊಳಿಸಲು ಪಣ ತೊಟ್ಟಿದೆ. ಈ ಎಲ್ಲ ಕಾಮಗಾರಿಗಳು ಕೆಲವೇ ದಿನಗಳಲ್ಲೇ ವೇಗ ಪಡೆಯಲಿದ್ದು ಪೂರ್ಣಗೊಳ್ಳಲು ವರ್ಷವೇ ಕಳೆಯಲಿದೆ ಎಂಬುದಾಗಿ ಮೂಲಗಳು ಖಚಿತಪಡಿಸಿದವು.

ವಿಭಾಗಗಳಿಗೂ ಸೌಲಭ್ಯ : ವಿವಿಯ 29 ವಿಭಾಗಗಳಲ್ಲಿ ಬೆರಣಿಕೆ ಸಂಖ್ಯೆಯ ವಿಭಾಗಗಳಿಗೆ ಮಾತ್ರ ಅಗತ್ಯ ಉಪಕರಣಗಳು ಹಾಗೂ ಪ್ರಾಯೋಗಿಕ ಲ್ಯಾಬ್‌ಗಳು ಹೊಂದಿವೆ. ಉಳಿದ ಹಲವು ವಿಭಾಗಗಳಿಗೆ ವಿಷಯಧಾರಿತ ಉಪಕರಣ ಮತ್ತು ಲ್ಯಾಬ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ, ವಿಭಾಗಗಳ ಮುಖ್ಯಸ್ಥರ ಸಭೆ ಕರೆದು ಆಯಾ ವಿಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮೂಲ ಸೌಕರ್ಯಗಳ ಬಗ್ಗೆ ಒದಗಿಸಲು ನಿರ್ಧಾರಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲೇ ವಿಭಾಗಗಳಲ್ಲಿ ದಾಖಲಾತಿ ಪ್ರಮಾಣವು ಹೆಚ್ಚಲಿದೆ. ಮುಂದಿನ ವಾರವೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಯಾವುದಕ್ಕೆ ಎಷ್ಟು ಅನುದಾನ ಮೀಸಲಿಡಬೇಕು ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು.

ಎಲ್ಲ ತರಗತಿಗಳಿಗೆ ಸ್ಮಾರ್ಟ್ ಕ್ಲಾಸ್ : ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 42 ಕೋಟಿ ರೂ. ಅನುದಾನಕ್ಕೆ ಅನುಮೋದನೆ ದೊರೆತಿದೆ. ಇದರಲ್ಲಿ ವಿಭಾಗದ ಎಲ್ಲ ತರಗತಿಗಳಿಗೆ ಸ್ಮಾರ್ಟ್ ಕ್ಲಾಸ್‌ಗಳ ವ್ಯವಸ್ಥೆ ಮಾಡಲಾಗುವುದು. ಆಯಾ ವಿಭಾಗಗಳಿಗೆ ಪಿಠೋಪಕರಣಗಳು ಹಾಗೂ ಸೋಲಾರ್ ಸಿಸ್ಟ್‌ಮ್ ಅಳವಡಿಸುವುದು. ವಿಜ್ಞಾನ ವಿಭಾಗಕ್ಕೆ ಅತ್ಯಾಧುನಿಕ ಸೌಲಭ್ಯದ ಉಪಕರಣಗಳು ಒದಗಿಸುವುದು. ಸದ್ಯ ವಿವಿಯಿಂದ ಡಿಪಿಆರ್ ಸಿದ್ಧಗೊಳಿಸಿ ಇಲಾಖೆಗೆ ಸಲ್ಲಿಸಿದರೆ ಅನುದಾನ ಬಿಡುಗಡೆಯಾಗಲಿದೆ.

ಕೋಟ್.. ಕೆಎಂಆರ್‌ಸಿ ಅನುದಾನದಿಂದ ವಿದ್ಯಾರ್ಥಿನಿಲಯಗಳಿಗೆ ಬೆಡ್ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲಾಗುವುದು. ಅಧಿಕಾರಿಗಳ ಜತೆ ಸಭೆ ಕರೆದು ಅಭಿವೃದ್ಧಿಯ ಕಾಮಗಾರಿಗಳ ಬಗ್ಗೆ ಚರ್ಚಿಸಿ ತಿರ್ಮಾನಿಸಲಾಗುವುದು.

- ಪ್ರೊ.ಎಂ.ಮುನಿರಾಜು, ಕುಲಪತಿ, ವಿಎಸ್‌ಕೆ, ವಿವಿ, ಬಳ್ಳಾರಿ.

ಕೋಟ್... ಕೆಕೆಆರ್‌ಡಿಬಿ ಅನುದಾನದಿಂದ ವಿವಿಯ ಎಲ್ಲ ತರಗತಿಗಳಿಗೆ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗುವುದು.

- ಎಸ್.ಎನ್.ರುದ್ರೇಶ್, ಕುಲಸಚಿವ, ವಿಎಸ್‌ಕೆ, ವಿವಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net