

ಬೆಟ್ಟದಪುರ: ಗ್ರಾಮದಲ್ಲಿರುವ ಪ್ರವಾಸಿ ಮಂದಿರಕ್ಕೆ ಈಗಾಗಲೇ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ, ಅಭಿವೃದ್ಧಿ ಕೈಗೊಳ್ಳಲು ಆದ್ಯತೆ ನೀಡಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಶನಿವಾರ ರಸ್ತೆ ಅಭಿವೃದ್ಧಿ ಮತ್ತು ವೃತ್ತ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.
ಪಿರಿಯಾಪಟ್ಟಣ ತಾಲೂಕು ಕೇಂದ್ರದ ಪ್ರವಾಸಿ ಮಂದಿರ ಅಭಿವೃದ್ಧಿಗೆ 3 ಕೋಟಿ ರೂ. ಮತ್ತು ಬೆಟ್ಟದಪುರ ಪ್ರವಾಸಿ ಮಂದಿರ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವುದಕ್ಕೆ ಕ್ರಮ ವಹಿಸಲಾಗಿದೆ. ಅಲ್ಲದೆ ಇಲ್ಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೂಡ ವಿಶೇಷ ಕಾಳಜಿ ವಹಿಸಲಾಗಿದೆ. ಸಭೆಯಲ್ಲಿ ಸ್ಥಳೀಯ ಜನರ ಸಮಸ್ಯೆಗಳನ್ನು ಅಲಿಸಲಾಗಿದ್ದು, ಅವುಗಳನ್ನು ಪರಿಹಾರ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬೆಟ್ಟದಪುರ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರದ ಜತೆ ಐತಿಹಾಸಿಕ ಮಹತ್ವವಿರುವ ಸ್ಥಳವು ಹೌದು. ಹಿಂದಿನ ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗಿದೆ. ಗ್ರಾಮದಲ್ಲಿ ಸಣ್ಣಪುಟ್ಟ ರಸ್ತೆ ಅಭಿವೃದ್ಧಿ ಮತ್ತು ಇತರೆ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಗ್ರಾಪಂನವರು ಮತ್ತು ಸಂಬಂಧಿಸಿದ ಇಲಾಖೆಯವರು ಗಮನ ನೀಡಬೇಕು. ಇತಿಹಾಸಿಕ ಬೆಟ್ಟಕ್ಕೆ ರೋಪ್ ವೇ ಸೇರಿದಂತೆ ಸಮಗ್ರ ಅಭಿವೃದ್ಧಿ ಸಂಬಂಧ ಸಾಕಷ್ಟು ವಿಚಾರಗಳು ನನ್ನ ಗಮನಕ್ಕೆ ಬಂದಿವೆ. ಈ ಕುರಿತು ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಬಳಿಕ ಸಮೀಪದ ಭುವನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ, ಕೊಣಸೂರು ಗ್ರಾಮದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಆಶ್ರಯ ಸಮಿತಿ ಮತ್ತು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಮುಖಂಡರಾದ ಪ್ರಕಾಶ್, ಲೋಕೇಶ್, ಕುಂಜಪ್ಪ ಕಾರ್ನಾಡ್, ಸರಸ್ವತಿ, ಅನಿತಾ ತೋಟಪ್ಪಶೆಟ್ಟಿ, ಜಗದೀಶ್, ನಾಗರಾಜು, ಭೀಮಣ್ಣ, ಪುಟ್ಟರಾಜು, ಮಂಜುನಾಥ್, ತಹಸೀಲ್ದಾರ್ ನಿಸರ್ಗ ಪ್ರಿಯಾ ಜೆ, ಲೋಕೋಪಯೋಗಿ ಇಂಜಿನಿಯರ್‌ಗಳಾದ ಕುಮಾರ್, ದಿನೇಶ್, ಕೆಆರ್‌ಐಡಿಎಲ್ ಇಂಜಿನಿಯರ್ ಸುಂದರ್ ರಾಜ್, ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಬ್ ಇನ್‌ಸ್ಪೆಕ್ಟರ್ ಅಜಯ್ ಕುಮಾರ್, ಪಿಡಿಒ ಮಂಜುನಾಥ್ ಇತರರು ಇದ್ದರು.