

ಮೂಡಿಗೆರೆ: ಕಾಡಾನೆಗಳನ್ನು ಮೀಸಲು ಅರಣ್ಯಕ್ಕೆ ಓಡಿಸಿ ಅರಣ್ಯದ ಸುತ್ತ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಕ್ರಿಯಾಯೋಜನೆ ತಯಾರಿಸಿ ನೀಡಿದರೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ತಿಳಿಸಿದರು.
ತಾಪಂನಲ್ಲಿ ನಡೆದ ಪ್ರಗತಿ ಮತ್ತು ಕುಂದು ಕೊರತೆ ಪರಿಶೀಲನಾ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ಆನೆಗಳ ಹಾವಳಿ ಕುರಿತು ಮಾಹಿತಿ ನೀಡಿದಾಗ ಮಾತನಾಡಿದ ಸಚಿವ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಕಾಡಾನೆಯನ್ನು ಪ್ರತಿದಿನ ಅರಣ್ಯ ಇಲಾಖೆ ಸಿಬ್ಬಂದಿ 5 ಕಿ.ಮೀ. ಮಾತ್ರ ಓಡಿಸಬಹುದು. ಮರಿ ಇದ್ದರೆ 1.5 ಕಿ.ಮೀ ಮಾತ್ರ ಓಡಿಸಲು ಸರ್ಕಾರದ ನಿಯಮವಿದೆ. ಟೆಂಟಕಲ್ ಐಬೆಕ್ಸ್ ಬೇಲಿ ಅಥವಾ ಟ್ರೆಂಚ್ ನಿರ್ಮಿಸಿದರೆ ಪ್ರಯೋಜನವಿಲ್ಲ. ಶಾಶ್ವತ ಪರಿಹಾರ ಬೇಕಾಗಿದೆ ಎಂದು ತಿಳಿಸಿದರು.
ಡಿಸಿಎಫ್ ರಮೇಶ್ ಬಾಬು ಪ್ರತಿಕ್ರಿಯಿಸಿ, ಕಾಡಾನೆ ಟಾಸ್ಕ್ ಫೋರ್ಸ್‌ನಲ್ಲಿ 32 ಸಿಬ್ಬಂದಿ ಇದ್ದಾರೆ. ಸರ್ಕಾರದ ಶೇ.50 ಸಹಾಯ ಧನದಲ್ಲಿ ಸೋಲಾರ್ ಬೇಲಿ ಸಿಗುತ್ತದೆ. 2 ಕೋಟಿ ರೂ. ಅನುದಾನ ನೀಡಿದರೆ ಬೇಲಿ ನಿರ್ಮಿಸಿ ಕಾಡಾನೆಗಳನ್ನು ಅರಣ್ಯದೊಳಗೆ ಕೂಡಿಹಾಕಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಕೆ.ಜೆ.ಜಾರ್ಜ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಕುದುರೆಮುಖ ಲಕ್ಯಾ ಡ್ಯಾಂನಿಂದ ಮಂಗಳೂರಿನ ಕೆಮಿಕಲ್ ಫ್ಯಾಕ್ಟರಿಗೆ ನೀರು ಹರಿಸುವುದು ಬೇಡ. ಅದನ್ನು ಕಳಸ ತಾಲೂಕಿಗೆ ಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜನ್ನಾಪುರ, ಹಾಂದಿ ಹಾಗೂ ಮಲ್ಲಂದೂರುಗಳಲ್ಲಿ ಜಾಗ ಗುರುತಿಸಿ ವಿದ್ಯುತ್ ಉಪ ಕೇಂದ್ರ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.
ಹೆದ್ದಾರಿ ಅಗಲೀಕರಣ ಕಾಮಗಾರಿ ಕೂಡಲೆ ಆರಂಭಿಸಬೇಕು. ರಸ್ತೆ ಬದಿಗೆ ಮಣ್ಣು ಸುರಿದು ಮರದ ರೆಂಬೆ ಕತ್ತರಿಸಿ ತಾತ್ಕಾಲಿಕವಾಗಿ ದುರಸ್ತಿ ಪಡಿಸಬೇಕು. ಮಲೆಮನೆ, ಮಧುಗುಂಡಿ, ಸಾರಗೋಡು ಮತ್ತು ಕುದುರೆಮುಖ ಗ್ರಾಮದ ನಿರಾಶ್ರಿತರಿಗೆ ಸುರಕ್ಷಿತ ಸ್ಥಳದಲ್ಲಿ ತ್ವರಿತವಾಗಿ ಜಾಗ ಗುರುತಿಸಿ ಮನೆ ನಿರ್ಮಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳಸ ಇನಾಂ ಭೂಮಿ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಇಬ್ಬರೂ ಚರ್ಚಿಸೋಣ ಎಂದು ಶಾಸಕಿ ನಯನಾ ಮೋಟಮ್ಮ ಅವರಿಗೆ ತಿಳಿಸಿದರು.
ಎಸ್ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಗೋಪಾಲಕೃಷ್ಣ, ಹೆದ್ದಾರಿ ಪ್ರಾಧಿಕಾರದ ಎಇಇ ಕಾಂಬಳೆ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.