ಪುರುಷೋತ್ತಮ ಪೆರ್ಲ ಕಾಸರಗೋಡು
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಿಸಬೇಕೆಂಬ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಬೇಡಿಕೆಗೆ ಕೇರಳ ಸರ್ಕಾರ ಹಸಿರು ನಿಶಾನೆ ತೋರಿದ್ದು, ಈ ನಿಟ್ಟಿನಲ್ಲಿ ಬಜಕೂಡ್ಲಿನ ಮಿನಿಸ್ಟೇಡಿಯಂ ಅಭಿವೃದ್ಧಿಗೆ ಒಂದು ಕೋಟಿ ರೂ. ಮೊತ್ತ ಮಂಜೂರುಗೊಳಿಸಿದೆ.
ಕೇರಳ ಸರ್ಕಾರ ಇತ್ತೀಚೆಗೆ ಮಂಡಿಸಿದ 2024-25ರ ಬಜೆಟ್‌ನಲ್ಲಿ ಬಜಕೂಡ್ಲು ಸ್ಟೇಡಿಯಂ ಅಭಿವೃದ್ಧಿಗೆ ಮೊತ್ತ ನಿಗದಿಪಡಿಸಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಶಾಸಕರ ಜತೆಗೆ ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಕೂಡ ಸ್ಟೇಡಿಯಂ ಅಭಿವೃದ್ಧಿಗೆ ನಿರಂತರ ಒತ್ತಡ ಹಾಕಿದ್ದರು.
ಪಂಚಾಯಿತಿ ಮಟ್ಟದ ಕೇರಳೋತ್ಸವ ಸಹಿತ ಹಲವು ಕ್ಲಬ್‌ಗಳು, ಸಂಘಟನೆಗಳು ತಮ್ಮ ಕ್ರೀಡಾಕೂಟಗಳನ್ನು ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲೇ ಆಯೋಜಿಸುತ್ತಿದ್ದು, ಪ್ರತಿ ಬಾರಿಯೂ ಮೂಲಸೌಕರ್ಯಗಳೇ ಅಡ್ಡಿಯಾಗುತ್ತಿವೆ. ಸೂಕ್ತ ಬೆಳಕಿನ ವ್ಯವಸ್ಥೆ, ನೀರು ಪೂರೈಕೆ, ಸುಸಜ್ಜಿತ ಶೌಚಗೃಹದ ಜತೆಗೆ ಮೇಲ್ಮಹಡಿ ಹೊಂದಿದ ಪ್ರೇಕ್ಷಕರ ಗ್ಯಾಲರಿ, ಸೂಕ್ತ ಪೆವಿಲಿಯನ್, ಕ್ರೀಡಾಂಗಣದ ವಿಸ್ತರಣೆ ಜತೆಗೆ ಸೂಕ್ತ ಆವರಣಗೋಡೆ ನಿರ್ಮಾಣವಾಗಬೇಕಾಗಿದೆ. ಪೆರ್ಲದಿಂದ ಸುಮಾರು ಒಂದುವರೆ ಕಿ.ಮೀ. ದೂರದದಲ್ಲಿರುವ ಸ್ಟೇಡಿಯಂ ಸಂಪರ್ಕಿಸುವ ರಸ್ತೆಯೂ ಶಿಥಿಲವಾಗಿದ್ದು, ಶೀಘ್ರವೇ ದುರಸ್ತಿಯೂ ಆಗಬೇಕಿದೆ.
ಮಂಜೇಶ್ವರ ಬ್ಲಾಕ್ ಪಂಚಾಯಿತಿಯ ಅಂದಿನ ಅಧ್ಯಕ್ಷರಾಗಿದ್ದ ಟಿ.ಆರ್.ಕೆ ಭಟ್ ಪೆರ್ಲ ಅವರ ಶ್ರಮದಿಂದ ಪಂಚಾಯಿತಿಗೆ ಸುಸಜ್ಜಿತ ಕ್ರೀಡಾಂಗಣ ಮಂಜೂರಾಗಿತ್ತು. ನಂತರದ ಎಣ್ಮಕಜೆ ಪಂಚಾಯಿತಿ ವತಿಯಿಂದ ಕಿರುಅಭಿವೃದ್ಧಿ ಕಾರ್ಯಗಳಷ್ಟೇ ನಡೆದಿವೆ.
ಎಲ್ಲ ಪಂಚಾಯಿತಿಗಳಿಗೂ ಸುಸಜ್ಜಿತ ಸ್ಟೇಡಿಯಂ ಎಂಬ ಧ್ಯೇಯದೊಂದಿಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಲಾ ಎಂಟು ಪಂಚಾಯಿತಿಗಳಿಗೂ ಸ್ಟೇಡಿಯಂ ಮಂಜೂರಾಗಿದ್ದು, ಕೆಲವೊಂದು ಉದ್ಘಾಟನೆಗೊಂಡಿವೆ. ಕ್ರೀಡಾವಲಯದ ಅಭಿವೃದ್ಧಿಯಿಂದ ಗ್ರಾಮೀಣ ಪ್ರದೇಶದ ಕ್ರೀಡಾಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕ್ರೀಡಾಪಟುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಮಿನಿ ಸ್ಟೇಡಿಯಂಗಳ ಅಭಿವೃದ್ಧಿಗೆ ರೂಪುರೇಷೆ ಆದ್ಯತೆ ಕಲ್ಪಿಸಲಾಗಿದೆ. ಎ.ಕೆ.ಎಂ ಅಶ್ರಫ್, ಶಾಸಕ
ಮಂಜೇಶ್ವರ ರಾಜ್ಯದಲ್ಲೇ ಮೊದಲು
ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲ ಪಂಚಾಯಿತಿಗಳಿಗೂ ಸ್ಟೇಡಿಯಂ ಮಂಜೂರಾದ ಖ್ಯಾತಿ ಮಂಜೇಶ್ವರಕ್ಕೆ ಲಭಿಸಿದೆ. ಮಂಜೇಶ್ವರ, ಮಂಗಲ್ಪಾಡಿ, ಪೈವಳಿಕೆ, ಮೀಂಜ, ವರ್ಕಾಡಿ, ಕುಂಬಳೆ, ಪೈವಳಿಕೆ, ಎಣ್ಮಕಜೆ ಪಂಚಾಯಿತಿಗಳ ಪೈಕಿ ಮಂಗಲ್ಪಾಡಿಯ ಉಪ್ಪಳ ಮಣ್ಣಂಗುಳಿ ಸ್ಟೇಡಿಯಂ ಕಾಮಗಾರಿ 3 ಕೋಟಿ ರೂ. ವೆಚ್ಚದಲ್ಲಿ ಪೂರ್ತಿಗೊಂಡು ಉದ್ಘಾಟನೆಗೊಂಡಿದೆ. ಪುತ್ತಿಗೆ ಪಂಚಾಯಿತಿಗೆ ಸ್ಟೇಡಿಯಂ ಮಂಜೂರಾಗಿದ್ದು, ಇದರ ಕೆಲಸ ಕಾರ್ಯಗಳು ಆರಂಭಗೊಳ್ಳಬೇಕಿದೆ.
ಇಂದು ಎರಡು ಗ್ರೌಂಡ್ ಉದ್ಘಾಟನೆ
ಮಂಜೇಶ್ವರ ಮತ್ತು ಎಣ್ಮಕಜೆ ಪಂಚಾಯಿತಿ ಸ್ಟೇಡಿಯಂ ಅಭಿವೃದ್ಧಿ ಕಾರ್ಯಗಳಿಗೆ ಆ.21ರಂದು ಚಾಲನೆ ದೊರೆಯಲಿದೆ. ಕ್ರೀಡಾ ಖಾತೆ ಸಚಿವ ಎ.ಅಬ್ದುಲ್ ರಹಮಾನ್ ಕಾಮಗಾರಿಗೆ ಚಾಲನೆ ನೀಡುವರು. ಜತೆಗೆ ಬಜಕೂಡ್ಲುವಿನ ಮಿನಿ ಸ್ಟೇಡಿಯಂನಲ್ಲಿ ನಡೆಯಲಿರುವ ನವೀಕರಣ ಕಾಮಗಾರಿಗಳಿಗೂ ಅಂದೇ ಶಿಲಾನ್ಯಾಸ ನೆರವೇರಲಿದೆ.
ಕೆಎಸ್‌ಡಿ-20ಆಗಸ್ಟ್-3, ಕೆಎಸ್‌ಡಿ-20ಆಗಸ್ಟ್-4:
ಅಭಿವೃದ್ಧಿಗೊಳ್ಳಲು ಬಾಕಿಯಿರುವ ಬಜಕೂಡ್ಲಿನ ಮಿನಿ ಸ್ಟೇಡಿಯಂ
ಕೆಎಸ್‌ಡಿ-20ಆಗಸ್ಟ್-5:
ಶಾಸಕ ಎ.ಕೆ.ಎಂ ಅಶ್ರಫ್