ಅನುದಾನ ಕೊಡದೆ ಮತ ಕೇಳುವ ಬಿಜೆಪಿ

sandur congress
ಸಂಡೂರು ತಾಲೂಕಿನ ಯಶವಂತನಗರದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದರು. ಸಿಎಂ ಸಿದ್ದರಾಮಯ್ಯ, ಸಂಸದ ಈ.ತುಕಾರಾಮ್, ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್, ಸಿಎಂ.ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಇದ್ದರು.
Published on

ಸಂಡೂರು: ರಾಜ್ಯದ ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ತಾಲೂಕಿನ ಯಶವಂತನಗರದಲ್ಲಿ ಗುರುವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಂಸದ ಈ.ತುಕಾರಾಮ್ ಹುಟ್ಟೂರು ಯಶವಂತನಗರ. ಅಲ್ಲದೆ ಶಾಸಕ, ಸಚಿವ, ಸಂಸದರಾಗಿರುವ ತುಕಾರಾಮ್ ವಿರುದ್ಧ ಯಾವುದೇ ಕೇಸ್ ಇಲ್ಲ. ಅವರ ಪತ್ನಿ ಅನ್ನಪೂರ್ಣ ತುಕಾರಾಮ್ ಈ ಊರಿನ ಸೊಸೆಯಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ಅನುದಾನ ಕೊಡದೆ ಉಪ ಚುನಾವಣೆಯಲ್ಲಿ ಮತ ಕೇಳಲು ಬರುತ್ತಿದ್ದಾರೆ ಎಂದು ದೂರಿದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು. ಆದರೆ, ಜಾರ್ಖಂಡ್ ಚುನಾವಣೆಯಲ್ಲಿ ಕರ್ನಾಟಕದ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿಗಳಲ್ಲದೆ ಪಠ್ಯಪುಸ್ತಕ, ಶೂಭಾಗ್ಯ, ಮನಸ್ವಿನಿ, ಸಂಧ್ಯಾಸುರಕ್ಷೆ ಸೇರಿ ಇತರ ಯೋಜನೆಗಳಿಗಾಗಿ 95ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯಲು, ಸಂಸದ ಈ.ತುಕಾರಾಮ್, ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಮಾತನಾಡಿದರು. ಬಂಡ್ರಿ, ಕೃಷ್ಣಾನಗರ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಿದರು. ಶಾಸಕರಾದ ಬಿ.ನಾಗೇಂದ್ರ, ಡಾ.ಎನ್.ಟಿ.ಶ್ರೀನಿವಾಸ್, ಎಂ.ಪಿ.ಲತಾ ಮಲ್ಲಿಕಾರ್ಜುನ, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್‌ಕುಮಾರ, ತಾಪಂ ಮಾಜಿ ಸದಸ್ಯ ವೆಂಕಟೇಶ್, ಪಿ.ಜಯರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net