

ಚಿಕ್ಕಮಗಳೂರು: ಲಯನ್ಸ್ ಕ್ಲಬ್ ತನ್ನ ಸುವರ್ಣ ಮಹೋತ್ಸವ ಆಚರಣೆ ಸವಿ ನೆನಪಿಗಾಗಿ ನಿರ್ಮಿಸುತ್ತಿರುವ ಲಯನ್ಸ್ ಸುವರ್ಣ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ತಾವೂ ಕೈ ಜೋಡಿಸುವುದಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಲಯನ್ಸ್ ಕ್ಲಬ್ ಪದಾಧಿಕಾರಿಗಳಿಗೆ ಭರವಸೆ ನೀಡಿದರು.
ನಗರದ ವಿಧಾನ ಪರಿಷತ್ ಸದಸ್ಯರ ನಿವಾಸದಲ್ಲಿ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಭೋಜೇಗೌಡ ಅವರಿಗೆ ಲಯನ್ಸ್ ಕ್ಲಬ್‌ನಿಂದ ಸನ್ಮಾನಿಸಿದ ವೇಳೆ ಮಾತನಾಡಿದ ಅವರು, ಲಯನ್ಸ್ ಕ್ಲಬ್ ತನ್ನ ೫೦ನೇ ವರ್ಷಾಚರಣೆ ಸವಿನೆನಪಿಗಾಗಿ ನಿರ್ಮಿಸುತ್ತಿರುವ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಕ್ಲಬ್ ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಲಯನ್ಸ್ ಸೇವಾ ಭವನದ ಮೇಲ್ಭಾಗದಲ್ಲಿ ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ಸುವರ್ಣ ಭವನದ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈವರೆಗೆ ೨೫ ಲಕ್ಷ ರೂ.ಗಳ ಕಾಮಗಾರಿ ಪೂರ್ಣಗೊಂಡಿದ್ದು, ಮುಂದುವರೆದ ಕಾಮಗಾರಿಗೆ ಇನ್ನು ೨೫ ಲಕ್ಷ ರೂ.ಗಳ ಅಗತ್ಯವಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯ ಎಂ.ಆರ್.ನಾಗರಾಜ್, ಲಯನ್ಸ್ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಕೆ.ಪುಷ್ಪರಾಜ್, ಮಾಜಿ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಹಾಗೂ ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.