ಅಬ್ದುಲ್ ಕಲಾಂ ವಸತಿ ಶಾಲೆಗೆ 17 ಕೋಟಿ ರೂ. ಅನುದಾನ ಬಿಡುಗಡೆ

26 ckm 5.jpg WEB
Published on

ಚಿಕ್ಕಮಗಳೂರು: ನಗರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ ಮಂಜೂರಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಜಿಲ್ಲಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಬೇಲೂರು ರಸ್ತೆ ವಕ್ಪ್ ನಿವೇಶನದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 1ನೇ ತರಗತಿಯಿಂದ ಪಿಯುಸಿವರೆಗೂ ಸಿಬಿಎಸ್​ಸಿ ಸಿಲೆಬಸ್​ನಲ್ಲಿ ಶಿಕ್ಷಣ ದೊರೆಯಲಿದೆ. ಈ ಕಾಮಗಾರಿಗೆ 2 ಹಂತದಲ್ಲಿ 17 ಕೋಟಿ ರೂ.ಬಿಡುಗಡೆಯಾಗಲಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಜನವಿಕಾಸ ಕಾರ್ಯಕ್ರಮ ಯೋಜನೆಯಡಿ ನಗರದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಅಲ್ಪಸಂಖ್ಯಾತರ ಹೈಟೆಕ್ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ವಿುಸಲಾಗುತ್ತಿದೆ. ಇದಲ್ಲದೆ ನಗರದಲ್ಲಿ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ನಿರ್ವಣಕ್ಕೆ 3.24 ಕೋಟಿ ಹಾಗೂ ತಲಾ 15 ಲಕ್ಷ ರೂ.ವೆಚ್ಚದಲ್ಲಿ 5 ಅಂಗನವಾಡಿ ತೆರೆಯಲು 75 ಲಕ್ಷ ರೂ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣ ಕ್ಷೇತ್ರಕ್ಕೆ 28 ಸಾವಿರ ಕೋಟಿ ರೂ ಮೀಸಲಿರಿಸಿದೆ. ಸರ್ಕಾರದ ವಿವಿಧ ಯೋಜನೆಗಳು ಬಡವರ, ಮಹಿಳೆಯರ ಕಲ್ಯಾಣ ಕೇಂದ್ರಿತವಾಗಿವೆ. ಶಿಕ್ಷಣದಿಂದ ಮಾತ್ರ ಬದಲಾವಣೆ ತರಲು ಸಾಧ್ಯವಿದ್ದು ಅದು ಪರಿವರ್ತನೆ ಸಾಧನ. ಇದಕ್ಕೆ ಉತ್ತಮ ನಿದರ್ಶನ ದೇಶ ಕಂಡ ಶ್ರೇಷ್ಠ ವಿಜ್ಞಾನಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ. ಶಿಕ್ಷಣ ಸಮಾಜಮುಖಿ ಚಿಂತನೆಯಿಂದ ಕೂಡಿರಬೇಕು. ಅದು ಸ್ವಾರ್ಥದಿಂದ ಕೂಡಿದ್ದರೆ ಸ್ವಾರ್ಥಿಗಳನ್ನು ರೂಪಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net