

ಮಾನ್ವಿ: ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಆರಂಭಿಸಿದ ನದಾಫ್ ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಇದುವರೆಗೂ ನಯಾಪೈಸೆ ನೀಡಿಲ್ಲ ಎಂದು ನದಾಫ್-ಪಿಂಜಾರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ. ಷರೀಫ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯವು ರಾಜ್ಯದಲ್ಲಿ 25 ಲಕ್ಷ ಜನಸಂಖ್ಯೆ ಹೊಂದಿದೆ. ಕುಲವೃತ್ತಿ ಹತ್ತಿಯಿಂದ ಹಾಸಿಗೆ, ದಿಂಬು, ಕಣ್ಣಿ, ತಯಾರಿಸಿ ಮಾರಾಟ ಮಾಡಿ ಬದುಕು ನಡೆಸುತ್ತಿದ್ದು, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ ಎಂದರು.
1993ರಲ್ಲಿ ವೃತ್ತಿ ಆಧಾರದ ಮೇಲೆ ಸರ್ಕಾರ ಹಿಂದುಳಿದ ಪ್ರವರ್ಗ -1 ರಲ್ಲಿ ಮೀಸಲಾತಿ ನೀಡಿದೆ. ಆದರೆ, ಪ್ರವರ್ಗ -1 ರಲ್ಲಿ 117 ಜಾತಿಗಳೊಂದಿಗೆ ಶೇ.4 ದೊರೆಯುವ ಮೀಸಲಾತಿ ಪಡೆಯಬೇಕಾಗಿರುವುದರಿಂದ ಸರ್ಕಾರ ನೇಮಕಾತಿ ಸೇರಿದಂತೆ ಇತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿದಾಗ ಈ ಹಿಂದೆ ಸಿಎಂ ಹಾಗಿದ್ದ ಎಸ್.ಆರ್.ಬೋಮ್ಮಾಯಿ ಹಿಂದುಳಿದ ಪ್ರವರ್ಗ-1 ರಲ್ಲಿ ಬರುವ ನದಾಫ್-ಪಿಂಜಾರ ಸಮುದಾಯ ಹಾಗೂ ಇತರ 13 ಜಾತಿಗಳ ಅಭಿವೃದ್ದಿ ನಿಗಮ ಸ್ಥಾಪಿಸಿ ಆದೇಶಿಸಿದರು. ಈಗ ಸಿಎಂ ಆಗಿರುವ ಸಿದ್ದರಾಮಯ್ಯಗೆ ಅನೇಕ ಸಲ ಮನವಿ ಸಲ್ಲಿಸಿದರೂ ನಿಗಮನಕ್ಕೆ ಅನುದಾನ ನೀಡಿಲ್ಲ. ಸರ್ಕಾರ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮಹಮ್ಮದ್ ರಹಮತ್ ಆಲಿ, ನಾಸೀರ್ ಆಲಿ, ಖಾನ್ ಸಾಬ್ ಪೋತ್ನಾಳ್, ಹುಸೇನ್ ಬಾಷಾ, ಮಹಮ್ಮದ್ ರಫಿ, ಹಾಜಿ ಮೆಕಾನಿಕ್, ಕಮ್ಲಿ ಬಾಷಾ, ಕಾಸಿಂ ಮೇಸ್ತ್ರಿ, ಅಬ್ದುಲ್ ಕಾಯಂ, ಹಜೀಬ್‌ಸಾಬ್ ನದಾಫ್ ಇದ್ದರು.