

ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಮಾಡಿದರು.
ತಾಲೂಕಿನ ಕೊಂಡಗೂಳಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶುಕ್ರವಾರ ವಿಜಯಪುರದಲಿನ ಸಚಿವರ ಸೃಗೃಹಕ್ಕೆ ತೆರಳಿ ಮನವಿ ಮಾಡಿದರು.
ನಿವೃತ್ತ ಶಿಕ್ಷಣಾಧಿಕಾರಿ ಎಸ್.ಎಂ. ನಾಗಾವಿ ಮಾತನಾಡಿ, ಗ್ರಾಮದಲ್ಲಿ ಪ್ರೌಢಶಾಲೆ ಅವಶ್ಯಕತೆಯಿದೆ. ಈ ಮೊದಲಿದ್ದ ಖಾಸಗಿ ಪ್ರೌಢಶಾಲೆ 3 ವರ್ಷಗಳ ಹಿಂದೆ ಬಂದಾಗಿದೆ. ಇದರಿಂದ 3 ಪ್ರಾಥಮಿಕ ಶಾಲೆಗಳ ಮಕ್ಕಳು ಪ್ರೌಢಶಾಲೆ ವಿದ್ಯಾಭ್ಯಾಸಕ್ಕೆ ದೇವರಹಿಪ್ಪರಗಿ ಅಥವಾ ತಾಳಿಕೋಟೆ ಪಟ್ಟಣಗಳಿಗೆ ತೆರಳಬೇಕಾಗಿದೆ. ಆದರೆ, ಎರಡು ಪಟ್ಟಣಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆಯಿಲ್ಲ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಹೆಣ್ಣುಮಕ್ಕಳು ಪಾಲಕರು ದೂರದ ಪ್ರೌಢಶಾಲೆಗಳಿಗೆ ಕಳಿಸಲು ಹಿಂಜರಿದು ವಿದ್ಯಾರ್ಥಿನಿಯರ ಪ್ರೌಢಶಾಲೆ ಶಿಕ್ಷಣ ಮೊಟಕುಗೊಳಿಸಲು ಕಾರಣರಾಗುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರಾಮದಲ್ಲಿ ಕೂಡಲೇ ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲು ವಿನಂತಿಸಿ ನಂತರ ಮನವಿ ಸಲ್ಲಿಸಿದರು.
ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯರ ಮನವಿಗೆ ಸ್ಪಂದಿಸಿದ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವೀರಗಂಟಯ್ಯ ಗದ್ದಿಗೆಮಠ, ಟಿ.ಎಸ್. ಹೆಬ್ಬಾಳ, ಸಿದ್ದಣ್ಣ ಸಿಂದಗೇರಿ, ಈರಣ್ಣ ತಾವರಖೇಡ, ಅಪ್ಪಾಸಾಹೇಬ ಬಸರಕೋಡ, ಕಾಶೀಲಿಂಗ ಸಿಂದಗೇರಿ, ಶಿವಾನಂದ ಗಾಣಿಗೇರ, ಶಶಿಕಲಾ ಕೆಂಭಾವಿ, ರಾಜು ಸೀತಿಮನಿ, ಸುಜಾತಾ ಕೆಂಭಾವಿ, ಅಕ್ಷಯ ಗೊಬ್ಬೂರ, ಮಹಿಬೂಬ್ ಖಾಜಿ, ಶ್ರೀಶೈಲ ಅಳ್ಳಗಿ, ಮಲಕಣ್ಣ ಮಲ್ಲಾಡ ಇದ್ದರು.