

ಉಡುಪಿ: ಮಲ್ಪೆಯ ತೊಟ್ಟಂನಲ್ಲಿ ಲಾರಿಯಿಂದ ಇಳಿಸುತ್ತಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಒರಿಸ್ಸಾ ಮೂಲದ ಬಾಬುಲ್ಲ (38) ಹಾಗೂ ಭಾಸ್ಕರ್ (40) ಮೃತರು. ಗುರುವಾರ ತೊಟ್ಟಂನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಮಂಗಳೂರಿನಿಂದ ಕಂಟೈನರ್ ಲಾರಿಯಲ್ಲಿ ಗ್ರಾನೈಟ್ ತರಲಾಗಿತ್ತು. ಕಂಟೇನರ್ ಲಾರಿಯಲ್ಲಿದ್ದ ಗ್ರಾನೈಟ್ಗಳನ್ನು ಕಟ್ಟಡ ನಿರ್ಮಾಣ ಸ್ಥಳದಲ್ಲಿದ್ದ ಕಾರ್ಮಿಕರು ಇಳಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಜೀವ ರಕ್ಷಕ ಈಶ್ವರ್ ಮಲ್ಪೆ ತಂಡದವರು ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಆಗ್ರಹ
ಮಲ್ಪೆ ಬಳಿಯ ತೊಟ್ಟಂನಲ್ಲಿ ಮನೆ ನಿಮಾರ್ಣಕ್ಕೆ ಕಂಟೈನರ್ ಲಾರಿಯಿಂದ ಗ್ರಾನೈಟ್ ಇಳಿಸುತ್ತಿದ್ದಾಗ ಒರಿಸ್ಸಾ ಮೂಲದ ಯುವ ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಕಾರ್ಮಿಕರು ಕೆಲಸ ಮಾಡುವಾಗ ಸಂಬಂಧಪಟ್ಟವರು ಯಾವುದೇ ಸುರಕ್ಷತೆ ಒದಗಿಸದೇ ಇರುವುದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಜೀವ ಹಾನಿಗೆ ಕಾರಣರಾದ ಗ್ರಾನೈಟ್ ಸಂಸ್ಥೆಯ ಮಾಲೀಕರು ಮೇಲೆ ಕಠಿಣ ಕ್ರಮ ಕೈಗೊಂಡು ಯುವ ಕಾರ್ಮಿಕರ ಕುಟುಂಬಗಳಿಗೆ ತಲಾ ರೂ. 10 ಲಕ್ಷ ಪರಿಹಾರ ನೀಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಆಗ್ರಹಿಸಿದೆ.