

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸತ್ತೂರನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ರಥಸಪ್ತಮಿ, ಶಾರದಾ ಪೂಜೆ, ಹಿರಿಯರಿಗೆ ನಮನ, ಅಜ್ಜ- ಅಜ್ಜಿಯರಿಗೆ ಗೌರವ ಸಲ್ಲಿಸುವ `ನಮ್ಮ ಜೀವನದ ಹಿರಿಮೆಗೆ ನಮನ' ಎಂಬ ವಿಶೇಷ ಕಾರ್ಯಕ್ರಮವನ್ನು ಮಂಗಳವಾರ ಆಚರಿಸಲಾಯಿತು.
ಅಜ್ಜ- ಅಜ್ಜಿಯರಿಗೆ ಸಂತೋಷ ನೀಡಲು ಹಳೆಯ ಆಟಗಳನ್ನು ಆಯೋಜಿಸಲಾಗಿತ್ತು. ವಿಜೇತರಾದವರಿಗೆ ವಿಶೇಷ ಬಹುಮಾನ ನೀಡಲಾಯಿತು. ಕಾರ್ಯಕ್ರಮವು ಹಿರಿಯರಿಗೆ ಹಳೆಯ ದಿನಗಳ ನೆನಪು ತರಿಸಿತು.
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರವು ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ನೀಡುವ ಪಾಠಶಾಲೆಯÁಗಿದೆ ಎಂದು ಅಜ್ಜ- ಅಜ್ಜಿಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಕರೆಸ್ಪಾಂಡೆ0ಟ್ ಗುರುರಾಜ್ ಅಗಡಿ ಮಾತನಾಡಿ, ಹಿರಿಯರ ಉತ್ಸಾಹ, ಮಕ್ಕಳಲ್ಲಿ ಸಂಸ್ಕಾರದ ಬೆಳವಣಿಗೆಗೆ ಪ್ರೇರಣೆ. ಇಂತಹ ಕಾರ್ಯಕ್ರಮಗಳು ಶಾಲೆಯ ಸಂಸ್ಕಾರ ಶಿಕ್ಷಣವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದರು.
ಪ್ರಾಚಾರ್ಯೆ ಡಾ. ಅನಿತಾ ರೈ ಮಾತನಾಡಿ, ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಹಿರಿಯರ ಅನುಭವ ಮತ್ತು ಅವರ ಆಶೀರ್ವಾದ ಅಗತ್ಯ ಎಂದರು.
ಶಾಲಾ ಮಕ್ಕಳು ತಮ್ಮ ಅಜ್ಜ-ಅಜ್ಜಿಯರ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಸವಿತಾ ನಿರೂಪಿಸಿದರು. ರಶ್ಮಿ ಸ್ವಾಗತಿಸಿದರು. ಸುಷ್ಮಾ ವಂದಿಸಿದರು.