ಅಜ್ಜರಣಿಗಿಲ್ಲ ಸೇತುವೆ ಭಾಗ್ಯ

Grandpa doesn't have a bridge.
ವರದಾ ನದಿ ನೀರಿನಲ್ಲಿ ದಾಟುತ್ತಿರುವ ಅಜ್ಜರಣಿ ಗ್ರಾಮದ ರೈತರು.
Published on

ಮಂಜುನಾಥ ಸಾಯೀಮನೆ ಶಿರಸಿ

ತಾಲೂಕಿನ ಬನವಾಸಿ ಸಮೀಪದ ಅಜ್ಜರಣಿಯ ಜನತೆ ಬನವಾಸಿಗೆ ತೆರಳಲು ವರದಾ ನದಿ ನೀರು ದಾಟಿಕೊಂಡು ಬರಬೇಕು. ಆಗ ಲುಂಗಿಯನ್ನು ಎದೆ ಎತ್ತರಕ್ಕೆ ಕಟ್ಟಿಕೊಂಡು ಸೊಂಟದವರೆಗಿನ ನೀರಿನಲ್ಲಿಯೇ ನಿತ್ಯ ಸಾಗಬೇಕಿದೆ !

ಹೌದು. 150ಕ್ಕೂ ಅಧಿಕ ಮನೆಗಳು, ಶಾಲೆ ಇರುವ ಅಜ್ಜರಣಿ ಗ್ರಾಮಕ್ಕೆ ಈಗ ಸಂಪರ್ಕವೇ ಕಠಿಣ. ಹೊಸ ಸೇತುವೆ ನಿರ್ಮಾಣಕ್ಕಾಗಿ ಹಳೇ ಸೇತುವೆ ಕೆಡವಲಾಗಿದೆ. ಆ ಬಳಿಕ ಕೆಲ ಗೊಂದಲಗಳು ಉದ್ಭವಿಸಿದ್ದರಿಂದ ಹೊಸ ಸೇತುವೆ ನಿರ್ಮಿಸಲಾಗಿಲ್ಲ. ಈಗ ಹೊಸ ಸೇತುವೆಯೂ ಇಲ್ಲ, ಹಳೇ ಸೇತುವೆಯೂ ಇಲ್ಲದೇ ಪ್ರತಿ ದಿನ ಅಜ್ಜರಣಿಯ ಜನತೆ ವರದಾ ನದಿ ನೀರಿನಲ್ಲಿಯೇ ದಾಟಿ ಬನವಾಸಿ ತಲುಪುವಂತಾಗಿದೆ.

ಬನವಾಸಿ ಸಮೀಪದ ಊರುಗಳಾದ ಅಜ್ಜರಣಿ ಮತ್ತು ಮುತ್ತಗುಣಿ ಗ್ರಾಮಗಳಿಗೆ ಹಿಂದಿನಿಂದಲೂ ಸಂಪರ್ಕ ಸೇತುವೆ ತೆಗ್ಗಿನ ಪ್ರದೇಶದಲ್ಲಿತ್ತಲ್ಲದೇ ಆಕಾರದಲ್ಲೂ ಚಿಕ್ಕದಾಗಿತ್ತು. ವರದಾ ನದಿಗೆ ಪ್ರವಾಹ ಬರುತ್ತಿದ್ದಂತೆಯೇ ಅಜ್ಜರಣಿಯ ಈ ಸೇತುವೆಯ ಮೇಲೆ ನೀರು ಏರಿ ವಾಹನ ಹಾಗೂ ಸಾರ್ವಜನಿಕರು ದಾಟಲು ಸಾಧ್ಯವಾಗದಂತಾಗುತ್ತಿತ್ತು. ಅಲ್ಲದೆ, ಸೇತುವೆಯೂ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅಜ್ಜರಣಿಯ ಸೇತುವೆಯನ್ನು ಎತ್ತರಿಸಿ ಹೊಸದಾಗಿ ನಿರ್ಮಿಸುವ ಸಲುವಾಗಿ 1.8 ಕೋಟಿ ರೂ. ಮಂಜೂರು ಮಾಡಿದ್ದರು. ಅದೇ ವರ್ಷ ವರದಾ ನದಿಯ ಪ್ರವಾಹ ಜಾಸ್ತಿ ಇರುವುದನ್ನು ಗಮನಿಸಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಡಿಯಲ್ಲಿಯೂ ಹಣ ಮಂಜೂರು ಮಾಡಿಸಿ ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಹೊಸ ನೀಲಿನಕ್ಷೆ ಸಿದ್ಧಪಡಿಸುವಂತೆ ಇಂಜಿನಿಯರ್‌ಗಳಿಗೆ ಸೂಚಿಸಿದ್ದರು. ಎಲ್ಲವೂ ಒಪ್ಪಿಗೆ ಆಗಿ 2020ರಲ್ಲಿ ಹೊಸ ಸೇತುವೆ ನಿರ್ಮಿಸಲುವ ಉದ್ದೇಶದಿಂದ ಹಳೇ ಸೇತುವೆ ಕೆಡವಿ, ತೆರವುಗೊಳಿಸುವ ಕಾರ್ಯವನ್ನೂ ಆರಂಭಿಸಲಾಗಿತ್ತು.

ಆದರೆ, ಹಳೇ ಸೇತುವೆ ತೆರವುಗೊಳಿಸುವ ಕಾರ್ಯ ಆರಂಭವಾದ ಮೇಲೆ ಹೊಸ ಸಮಸ್ಯೆಗಳು ಉದ್ಭವಗೊಂಡಿವೆ. ಸೇತುವೆ ಪಕ್ಕದ ಭತ್ತದ ಗದ್ದೆ ಮಾಲೀಕರು ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಕಾಮಗಾರಿ ನಿಲ್ಲಿಸಿದ್ದಾರೆ. ಹೊಸ ಸೇತುವೆಯ ಪಿಚ್ಚಿಂಗ್ ನಿರ್ಮಾಣದ ವೇಳೆ ತಮ್ಮ ಭತ್ತದ ಗದ್ದೆಗೆ ಧಕ್ಕೆ ಆಗುತ್ತದೆ. ಹೀಗಾಗಿ, ಸೇತುವೆ ನಿರ್ಮಾಣ ಮಾಡಬಾರದು ಎಂದು ಆಕ್ಷೇಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಹೊಸ ಸೇತುವೆ ನಿರ್ಮಾಣದ ಕಾರ್ಯ ಅಲ್ಲಿಗೇ ನಿಂತಿದೆ.

ಹಳೇ ಸೇತುವೆಯೂ ಇಲ್ಲದೆ, ಹೊಸ ಸೇತುವೆಯೂ ನಿರ್ಮಾಣವಾಗದೇ ಅಜ್ಜರಣಿ ಭಾಗದ ಜನತೆ ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಬನವಾಸಿ ಪಕ್ಕದಲ್ಲೇ ಕಾಣಿಸುತ್ತದೆ. ಆದರೆ, ಹೋಗಲು ಮಾರ್ಗವಿಲ್ಲ. ಹೀಗಾಗಿ, ಅಜ್ಜರಣಿಯ ಜನ ಬನವಾಸಿಗೆ ಹೋಗಲು 10 ಕಿ.ಮೀ. ಸುತ್ತಿ, ಗುಡ್ನಾಪುರದ ಮೂಲಕ ಬರಬೇಕಿದೆ. ಸ್ವಂತ ವಾಹನ ಇದ್ದವರು, ಆರ್ಥಿಕವಾಗಿ ಸಬಲರಾದವರು ಸುತ್ತಿ ಬಳಸಿ ಓಡಾಡುತ್ತಾರೆ. ಬಸ್‌ಗೆ ಬರುವ ಬಡವರು ಅನಿವಾರ್ಯವಾಗಿ ವರದಾ ನದಿ ನೀರಿಗಿಳಿದು ಬಳಿಕ ಅರ್ಧ ಕೆಡವಲಾಗಿರುವ ಸೇತುವೆ ಬಳಸಿಕೊಂಡು ತಮ್ಮ ಊರಿಗೆ ತೆರಳುತ್ತಿದ್ದಾರೆ. ಪ್ರೌಢಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯವೂ ಪರದಾಡುವಂತಾಗಿದೆ. ಕೆಲ ರೈತರ ಪರಿಸ್ಥಿತಿ ಇನ್ನೂ ಭಿನ್ನ. ನದಿಯ ಕಡೆ ಇರುವ ತಮ್ಮ ಹೊಲಕ್ಕೆ ತೆರಳಬೇಕೆಂದರೆ ಕೃಷಿ ಸಾಮಗ್ರಿಗಳನ್ನೆಲ್ಲ ತಲೆ ಮೇಲೆ ಹೊತ್ತು ಈ ದಾರಿಯಲ್ಲಿ ಸಾಗುವ ಅನಿವಾರ್ಯತೆ ಎದುರಾಗಿದೆ.

ಸಂಧಾನಗಳೆಲ್ಲ ವಿಫಲ

ಅಜ್ಜರಣಿ ಜನರ ಸಮಸ್ಯೆ ಬಗೆಹರಿಸುವ ಸಲುವಾಗಿ ಸ್ಥಳೀಯ ಭೂಮಾಲೀಕರೊಂದಿಗೆ ಅಧಿಕಾರಿಗಳ ಹಲವು ಸುತ್ತಿನ ಮಾತುಕತೆಗಳಾಗಿವೆ. ಹೊಸ ಸೇತುವೆ ನಿರ್ಮಾಣದಿಂದ ಕಳೆದುಕೊಳ್ಳಿವ ಭೂಮಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರೂ ಸಂಧಾನ ಯಶಸ್ವಿಯಾಗಿಲ್ಲ. ಸರ್ಕಾರ ನೀಡುವ ಪರಿಹಾರದ ಜತೆ ವೈಯಕ್ತಿಕವಾಗಿ ಪರಿಹಾರ ನೀಡುತ್ತೇನೆ, ಸಮಸ್ಯೆ ಎದುರಿಸುತ್ತಿರುವ ಅಜ್ಜರಣಿಯ ಜನತೆಗೆ ನ್ಯಾಯ ಒದಗಿಸೋಣ ಎಂದು ಸ್ವತಃ ಶಾಸಕ ಶಿವರಾಮ ಹೆಬ್ಬಾರ್ ಭೂ ಮಾಲೀಕರಲ್ಲಿ ವಿನಂತಿಸಿಕೊಂಡಿದ್ದರೂ ಸಮಸ್ಯೆ ಬಗೆಹರಿದಿಲ್ಲ.

ಸೇತುವೆಗಾಗಿ ಜಾಗ ಬಿಟ್ಟುಕೊಡುವ ಸಲುವಾಗಿ ಭೂಮಾಲೀಕರಿಗೆ ಈಗಲೂ ಪರಿಹಾರ ಕೊಡಲು ನಾವು ಬದ್ಧರಾಗಿದ್ದೇವೆ. ಆದರೂ ಭೂಮಾಲೀಕರು ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆ ಹಿಂಪಡೆಯಲು ಸಿದ್ಧರಿಲ್ಲ. ಹೀಗೆಯೇ ಮುಂದುವರಿದರೆ ಸರ್ಕಾರದಿಂದ ಅನಿವಾರ್ಯವಾಗಿ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಶಿವರಾಮ ಹೆಬ್ಬಾರ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net