

ಅರಕಲಗೂಡು: ಪಟ್ಟಣದ 18 ಕೋಮಿನ ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಿ ತನ್ನ ಬಳಿಗೆ ಬರುವ ಭಕ್ತರನ್ನು ಹರಸುವ ಮೂಲಕ ಸಾಕ್ಷಾತ್ ಮಹಾಮಹಿಮೆ ದೇವತೆಯಾಗಿ ನೆಲೆ ನಿಂತಿದ್ದಾಳೆ.
ಅರಕಲಗೂಡು ಆಳಿದ ಪಾಳೇಗಾರ ಕೃಷ್ಣಪ್ಪನಾಯಕ ಕಟ್ಟಿದ ಕೋಟೆ ಪ್ರದೇಶದಲ್ಲಿ ಐತಿಹಾಸಿಕ ಕೊತ್ತಲು ಗಣಪತಿ, ಶ್ರೀಲಕ್ಷ್ಮೀನರಸಿಂಹಸ್ವಾಮಿ, ಕೋದಂಡರಾಮ, ಶ್ರೀ ಅಮೃತೇಶ್ವರ, ನೀರು ಬಾಗಿಲು ಅಂಜನೇಯಸ್ವಾಮಿ, ಶ್ರೀ ಚಿಕ್ಕಮ್ಮ, ಶ್ರೀ ದೊಡ್ಡಮ್ಮ ದೇವಸ್ಥಾನಗಳಿದ್ದು, ಇವುಗಳ ಪೈಕಿ ಗ್ರಾಮದೇವತೆ ದೊಡ್ಡಮ್ಮ ದೇವತೆಯ ಮಹಿಮೆ ಅಪಾರ.
ಶ್ರೀ ದೊಡ್ಡಮ್ಮ, ಚಿಕ್ಕಮ್ಮ, ಸಿಂಗಪಟ್ಲದಮ್ಮ ದೇವತೆಗಳು ಅಕ್ಕ-ತಂಗಿಯರು. ಅನಾದಿ ಕಾಲದಿಂದಲೂ ಜನಪದ ಶೈಲಿಯಲ್ಲಿ ಈ ದೇವತೆಗಳಿಗೆ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ದೊಡ್ಡಮ್ಮ ದೇವತೆಗೆ ಐದು ವರ್ಷಗಳಿಗೊಮ್ಮೆ ದೊಡ್ಡ ಜಾತ್ರೆ ನಡೆದರೆ, ದೊಡ್ಡಮ್ಮ ದೇವಿ ಜಾತ್ರೆಗೆ ಒಂದು ತಿಂಗಳು ಮುನ್ನ ಚಿಕ್ಕಮ್ಮ ಜಾತ್ರೆ ನಡೆಯುತ್ತದೆ. ದೊಡ್ಡಮ್ಮ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸೇರಲಿದ್ದು, ಜಾತ್ರೆ ಸಡಗರಕ್ಕೆ ಅರಕಲಗೂಡು ಸಾಕ್ಷಿಯಾಗುತ್ತದೆ.
ದೊಡ್ಡಜಾತ್ರೆಯಲ್ಲಿ 18 ಕೋಮಿನ ಭಕ್ತರು ಹರಕೆ ಹೊತ್ತು ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ. ನಂತರ ಅರಿಶಿಣ ಕುಟ್ಟುವ ಕಾರ್ಯ ನಡೆಯುತ್ತದೆ. ನಂತರ ಕೊಂಡ ಹಾಯುವ ಕಾರ್ಯಕ್ರಮ ನಡೆಯುತ್ತದೆ. ದುಷ್ಟಶಕ್ತಿಗಳನ್ನು ಊರಿನಿಂದ ಆಚೆ ಓಡಿಸಲು ಊರ ಸುತ್ತ ಕೆಂಪು ಬಲಿ ಅನ್ನ ಎರಚಲಾಗುತ್ತದೆ. ಇದಕ್ಕೂ ಮುನ್ನ ಊರಿನ ಸೋಂಕು ಮಾರಿ ತೆಗೆದು ತಿದ್ದಮ್ಮನ ಉತ್ಸವ ನಡೆಸಲಾಗುತ್ತದೆ. ಈ ವೇಳೆ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಒಲೆ ಹಚ್ಚದೆ ಹೊರಬೀಡು ಹಬ್ಬ ಆಚರಿಸುತ್ತಾರೆ. ಊರಿನಿಂದ ಹೊರ ತೆರಳಿ ಅಡುಗೆ ಸಿದ್ಧಪಡಿಸಿ ತಮ್ಮ ನೆಂಟರಿಷ್ಟರು, ಸಂಬಂಧಿಕರು, ಆಪ್ತರನ್ನು ಕರೆಸಿ ಊಟ ಬಡಿಸುವ ಮೂಲಕ ಹೊರಬೀಡು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಯಲ್ಲಿ ಹೆಂಗಸರು, ಗಂಡಸರು ತಳಿಗೆ ಹೊತ್ತು ದೇವಿಗೆ ಪೂಜೆ ಸಲ್ಲಿಸುವುದು ವಾಡಿಕೆ.
ಬ್ರಾಹ್ಮಣರ ಬೀದಿಯ ಹೆಬ್ಬಾರ್ ವಂಶಕ್ಕೆ ಸೇರಿದ ಹೆಣ್ಣು ಮಗಳು ಮನೆಯಿಂದ ಹೊರಗೆ ಹೋಗಿ ಮರಳುತ್ತಾರೆ. ಈ ವೇಳೆ ತನ್ನ ತಾಯಿಗೆ ಅನ್ಯ ಕೋಮಿನ ಯುವಕನ ಮೇಲೆ ತನಗೆ ಪ್ರೇಮಾಂಕುರವಾಗಿರುವ ಕುರಿತು ನಿವೇದಿಸಿಕೊಳ್ಳುತ್ತಾಳೆ. ಇದಕ್ಕೆ ತಾಯಿ ಒಪ್ಪದ ಕಾರಣ ಯುವತಿ ಆತ್ಮಹತ್ಯೆಗೆ ಮುಂದಾಗುತ್ತಾಳೆ. ಗ್ರಾಮದ ಕೆರೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವುದನ್ನು ಕಂಡ ಸ್ಥಳೀಯರು ಆಕೆಯನ್ನು ವಾಪಸ್ ಕರೆತರುತ್ತಾರೆ. ಅಷ್ಟರಲ್ಲಿ ಈಕೆಯ ತಾಯಿಗೆ ಜ್ಞಾನೋದಯವಾಗಿ ಮನೆಯಿಂದ ಹೊರಗೆ ಬಂದು ಮಗಳನ್ನು ಕೂಗುತ್ತಾಳೆ. ಆದರೆ ಹೆಣ್ಣು ಮಗಳು ಊರೊಳಗೆ ಪ್ರವೇಶಿಸುವುದು ಬೇಡವೆಂದು ನಿಶ್ಚಯಿಸಿ ಹೆಬ್ಬಾರ್ ವಂಶಸ್ಥರ ಮನೆಯ ಪಶ್ಚಿಮದ ಕಡೆಗೆ ಮುಖ ಮಾಡಿ ನಾನು ಇಲ್ಲಿಯೇ ಕಲ್ಲಾಗಿ ಐಕ್ಯವಾಗಿ ಊರು ಕಾಯುವುದಾಗಿ ತಿಳಿಸಿ ಐಕ್ಯವಾಗುತ್ತಾಳೆ ಎಂದು ಹಿರಿಯರು ಹೇಳುತ್ತಾರೆ.
ದೊಡ್ಡಮ್ಮ ದೇವಿಗೆ ಬಿಸಿಲು ಮಾರಿಯಮ್ಮ ಎಂಬ ಹೆಸರು ಕೂಡ ಇದೆ. ದೊಡ್ಡಮ್ಮ ದೇವಿ, ದಂಡಿನ ಮಾರಿಯಮ್ಮ ದೇವಿ ಅಕ್ಕ ತಂಗಿಯರು. ಕೊಡಗಿನ ಐಗೂರು ಪ್ರದೇಶದಿಂದ ಇತ್ತ ವಲಸೆ ಬಂದವರು ಎನ್ನುವ ಐತಿಹ್ಯವಿದೆ. ಕೊಡಗಿನಿಂದ ವಲಸೆ ಬರುವಾಗ ದಂಡಿನ ಮಾರಿಯಮ್ಮ ಕೊಡಗಿಗೆ ಸೇರಿದ ಗಡಿ ಭಾಗದ ಚಿಕ್ಕ ಭಂಡಾರ ಗ್ರಾಮದಲ್ಲಿ ಐಕ್ಯವಾಗುತ್ತಾಳೆ. ಅರಕಲಗೂಡಿಗೆ ಆಗಮಿಸಿದ ದೊಡ್ಡಮ್ಮ ದೇವಿ ತನ್ನನ್ನು ಹಿಂಬಾಲಿಸಿದ ತಂಗಿ ದಂಡಿನ ಮಾರಿಯಮ್ಮ ಬರುವುದನ್ನು ಕಾಣಲು ಪಶ್ಚಿಮದ ಕಡೆಗೆ ಹಿಂದಿರುಗಿ ಮುಖ ಮಾಡಿ ನೋಡುತ್ತಾಳೆ. ಆದರೆ ದಂಡಿನ ಮಾರಿಯಮ್ಮ ಚಿಕ್ಕ ಭಂಡಾರ ಗ್ರಾಮದಲ್ಲಿ ಐಕ್ಯವಾಗಿರುವುದನ್ನು ಅರಿತು ದೊಡ್ಡಮ್ಮ ದೇವಿ ಮುಂದೆ ಸಾಗದೆ ಅರಕಲಗೂಡಿನಲ್ಲಿ ನೆಲೆ ನಿಲ್ಲುತ್ತಾಳೆ ಎನ್ನುವ ಪ್ರತೀತಿ ಕೂಡ ಇದೆ.
ಭಾರತೀಯ ಸಾಂಸ್ಕೃತಿ ಪರಂಪರೆಯ ಸನಾತನ ಹಿಂದು ಧರ್ಮದಲ್ಲಿ ಅನೇಕ ದೇವಸ್ಥಾನಗಳ ಬಾಗಿಲು ಪೂರ್ವದ ಕಡೆಗಿರುತ್ತವೆ. ಆದರೆ ತನ್ನ ತಂಗಿ ದಂಡಿನ ಮಾರಿಯಮ್ಮ ಬರುವಿಕೆಯನ್ನು ನೋಡಲು ದೊಡ್ಡಮ್ಮ ದೇವಿ ಹಿಂದಿರುಗಿದ ಕಾರಣ ಪಶ್ಚಿಮ ದಿಕ್ಕಿಗೆ ದೊಡ್ಡಮ್ಮ ದೇವಸ್ಥಾನದ ಬಾಗಿಲು ಇದೆ. ದೊಡ್ಡಮ್ಮ ದೇವಿಗೆ ಬಿಸಿಲು ಮಾರಿಯಮ್ಮ ಎನ್ನುವ ಹೆಸರು ಕೂಡ ಇರುವುದು ಕಾಕತಾಳೀಯ.
ಶ್ರೀ ದೊಡ್ಡಮ್ಮ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಬಗೆಬಗೆಯ ಅಲಂಕಾರ ಮಾಡಲಾಗುತ್ತದೆ. ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು. ತಾಯಿ ಬೇಡಿದ ವರವನ್ನು ಅನುಗ್ರಹಿಸುವ ಜಗನ್ಮಾತೆಯಾಗಿದ್ದು, ಭಕ್ತರೂ ಅದರಂತೆ ನಡೆದುಕೊಳ್ಳುತ್ತಾರೆ.
ಮಂಜುನಾಥ್ ಅರ್ಚಕ
ಅರಕಲಗೂಡಿನ 18 ಕೋಮಿನ ಆರಾಧ್ಯ ದೇವತೆಯಾದ ದೊಡ್ಡಮ್ಮ ದೇವಿ ಭಕ್ತಿ ಮಹಿಮೆ ಮೆಚ್ಚಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿ, ರೋಗ-ರುಜಿನಗಳು ಬಾರದಂತೆ ಊರನ್ನು ಕಾಪಾಡಿ ಭಕ್ತರನ್ನು ಹರಸುತ್ತಿದ್ದು ಬಹು ಕಾಲದಿಂದ ಭಕ್ತರ ನಂಬಿಕೆ ಹುಸಿಯಾಗಿಲ್ಲ.
ಇಂದುಶ್ರೀರಾವ್ ದೇವಿ ಭಕ್ತೆ