

ಮಾನ್ವಿ: ರಾಜೋಳ್ಳಿಯಲ್ಲಿ ಪತ್ನಿ ಅಂಬಮ್ಮ (31) ಕೊಲೆ ಮಾಡಿದ್ದ ಪತಿ ಖಾಸಿಮಪ್ಪ ನಾಯಕ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ.
ಮನೆಯಲ್ಲಿ ಮಲಗಿದ್ದ ಅಂಬಮ್ಮ ಮೇಲೆ ಶುಕ್ರವಾರ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಖಾಸಿಮಪ್ಪ ನಾಯಕ (35) ಅರೋಲಿ ಸೀಮಾದ ಅಡವಿಖಾನಾಪುರ ಗ್ರಾಮದ ಹೊಲವೊಂದರಲ್ಲಿ ಶುಕ್ರವಾರ ಸಂಜೆ ನೇಣು ಹಾಕಿಕೊಂಡಿದ್ದಾರೆ. ಕುಡಿಯಲು ಹಣ ನೀಡುವಂತೆ ಖಾಸಿಮಪ್ಪ ಪ್ರತಿದಿನ ಹೆಂಡತಿಯನ್ನು ಪೀಡಿಸುತ್ತಿದ್ದ. ಹಣ ನೀಡದಿದ್ದಾಗ ಜಗಳವಾಡುತ್ತಿದ್ದ. ಹಣ ನೀಡದ್ದಕ್ಕೆ ಪತ್ನಿ ಕೊಲೆ ಮಾಡಿದ್ದ ಎಂದು ಹೇಳಲಾಗಿದೆ.
ರಾಜಲಬಂಡಾ ಗ್ರಾಮದ ಅಂಬಮ್ಮಗೆ ರಾಜೋಳ್ಳಿ ಗ್ರಾಮದ ಖಾಸಿಮಪ್ಪ ನಾಯಕ ಜತೆ 9 ವರ್ಷಗಳ ಹಿಂದೆ ಮದುವೆ ಆಗಿತ್ತು. ಈ ದಂಪತಿಗೆ ಮೂರು ವರ್ಷದ ತಾಯಣ್ಣ ಮತ್ತು 8 ವರ್ಷದ ಹನುಮೇಶ ಎಂಬ ಮಕ್ಕಳಿದ್ದಾರೆ. ದಂಪತಿ ಕಲಹದಿಂದಾಗಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ತಂದೆ-ತಾಯಿ ಕಳೆದುಕೊಂಡು ಇಬ್ಬರು ಮಕ್ಕಳನ್ನ ಅಂಬಮ್ಮ ತಾಯಿ ನರಸಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಡತನದಲ್ಲಿರುವ ನರಸಮ್ಮಗೆ ಇಬ್ಬರು ಮೊಮ್ಮಕಳನ್ನ ಸಾಕುವ ಜವಾಬ್ದಾರಿ ಬಿದ್ದಿದೆ. ಎಸ್ಪಿ ಬಿ.ನಿಖಿಲ್ ರಾಜೋಳ್ಳಿಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡರು. ಪಿಐ ವಿ.ಎಸ್.ಹಿರೇಮಠ ಇದ್ದರು.